ಕುಂದಾಪುರ: ಬೈಕ್ ಗೆ ಗ್ಯಾಸ್ ಸಿಲಿಂಡರ್ ಸಾಗಾಟದ ಟಾಟಾ ಏಸ್ ವಾಹನ ಢಿಕ್ಕಿಯಾಗಿ ಬೈಕ್ ಚಲಾಯಿಸುತ್ತಿದ್ದ ಕಾರು ರೇಸ್ ಚಾಂಪಿಯನ್ ರಂಜಿತ್ ಬಲ್ಲಾಳ್ (59) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಡಿ. 09 ರಂದು ಸಂಜೆ 4.30ರ ಸುಮಾರಿಗೆ ಸಂಭವಿಸಿದೆ.
ರಂಜಿತ್ ಬಲ್ಲಾಳ್ ಮಂಗಳೂರು ಮೂಲದ ಕೆ.ಬಿ. ಯುವರಾಜ ಬಲ್ಲಾಳ್ ಅವರ ಪುತ್ರ. ಇವರು ಕುಟುಂಬಸ್ಥರೊಂದಿಗೆ 3 ದಿನಗಳ ಹಿಂದೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ರಂಜಿತ್ ಅವರು ಬೈಕ್‌ನಲ್ಲಿ ಬರುತ್ತಿದ್ದರೆ, ಹಿಂದಿನಿಂದ ಮನೆಯವರೆಲ್ಲ ಕಾರಿನಲ್ಲಿ ಬರುತ್ತಿದ್ದರು. ಅರಾಟೆ ಸೇತುವೆಗಿಂತ ತುಸು ಹಿಂದೆ ಒಂದು ಸೇತುವೆಯಲ್ಲಿ ಸಂಚಾರ ನಿಷೇಧಿಸಿದ್ದರಿಂದ ಡೈವರ್ಶನ್ ನೀಡಿದ್ದು, ಅಲ್ಲಿ ಟಾಟಾ ಏಸ್ ಚಾಲಕ ಏಕಾಏಕಿ ನಿಧಾನ ಮಾಡಿದ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಬೈಕ್ ಟಾಟಾ ಏಸ್ ವಾಹನಕ್ಕೆ ಢಿಕ್ಕಿಯಾಯಿತು.
ಗಂಗೊಳ್ಳಿಯ 24×7 ಆಯಂಬುಲೆನ್ಸ್‌ನ ಇಬ್ರಾಹಿಂ ಹಾಗೂ ಅಬ್ರಾರ್ ಗಂಗೊಳ್ಳಿ ಮೃತದೇಹ ಆಸ್ಪತ್ರೆಗೆ ರವಾನಿಸಲು ಸಹಕರಿಸಿದರು.ಘಟನ ಸ್ಥಳಕ್ಕೆ ಗಂಗೊಳ್ಳಿ ಎಸ್‌ಐ ಹರೀಶ್ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹೆದ್ದಾರಿಯ ಎರಡೂ ಕಡೆಯ ವಾಹನಗಳನ್ನು ಒಂದೇ ಸೇತುವೆಯಲ್ಲಿ ಬಿಡಲಾಗುತ್ತಿರುವುದರಿಂದ ಅಪಘಾತದ ಹಿನ್ನೆಲೆಯಲ್ಲಿ ಹೊಸ ಸೇತುವೆಯಲ್ಲಿ ಕೆಲ ಸಮಯ ವಾಹನಗಳು ಸಾಲುಗಟ್ಟಿ ನಿಂತಿದ್ದವು.ರಂಜಿತ್ ಕಾರು ರಾಲಿಯಲ್ಲಿ ನ್ಯಾಶನಲ್ ಚಾಂಪಿಯನ್ ಆಗಿದ್ದರು.
ಪ್ರತಿಭಾವಂತರಾಗಿದ್ದ ಅವರು ನೂರಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದಿದ್ದರು. ಆಟೋ ಕ್ರಾಸ್ ಹಿಲ್ ಕೈಂಬ್‌ನಲ್ಲಿ ಅತ್ಯಂತ ವೇಗದ ಡ್ರೈವರ್ ಆಗಿಯೂ ಹೊರಹೊಮ್ಮಿದ್ದರು.ಹಲವು ಚಾಂಪಿಯನ್‌ಶಿಪ್‌ಗ್ನಲ್ಲಿ ಭಾಗವಹಿಸಿದ್ದ ರಂಜಿತ್ ಹಲವಾರು ಮಂದಿಗೆ ತರಬೇತಿ ನೀಡಿದ್ದು, ಅವರಲ್ಲಿ ಕೆಲವರು ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದರು. ಇದಲ್ಲದೆ ಬ್ಯಾಡ್ಮಿಂಟನ್, ಕ್ರಿಕೆಟ್ ಮತ್ತು ಸ್ಕೂಕರ್ ಆಟಗಾರ ರಾಗಿಯೂ ಗಮನ ಸೆಳೆದಿದ್ದರು. ಪ್ರತಿಷ್ಠಿತ ಕಂಪೆನಿಗಳಿಗೆ ಲೇಹ್, ಲಡಾಖ್, ಉತ್ತರಾ ಖಂಡ ಸಹಿತ ದೇಶಾದ್ಯಂತ ಸ್ಪರ್ಧಾಕೂಟಗಳನ್ನು ಸಂಘಟಿಸಿದ್ದರು. ಬೆಂಗಳೂರಿನಲ್ಲಿ ತಮ್ಮ ಸ್ವಂತ ಆರ್‌ಎಸಿ ಕಂಪೆನಿ ಮೂಲಕ ಉತ್ತಮ ಟ್ಯೂನರ್ ಆಗಿಯೂ ಹೆಸರು ಗಳಿಸಿದ್ದರು.