Thursday, December 12
Share News

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ತೆರಳಿ ಸಮುದ್ರ ಪಾಲಾಗಿದ್ದ ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿವೆ.

ಮಂಗಳವಾರ ಶಾವಂತಿ (15)ಯ ಮೃತದೇಹ ಪತ್ತೆಯಾಗಿತ್ತು. ಇಂದು (ಡಿಸೆಂಬರ್ 11) ದೀಕ್ಷಾ (15), ಲಾವಣ್ಯ (15), ವಂದನಾ (15) ಮೃತ ದೇಹಗಳು ಪತ್ತೆಯಾಗಿವೆ. ನಾಲ್ವರೂ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದರು.

ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, “ವಿದ್ಯಾರ್ಥಿಗಳು ನೀರುಪಾಲಾದ ಸುದ್ದಿ ತಿಳಿದು ಆಘಾತವಾಯಿತು. ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮೃತದೇಹಗಳು ಹುಟ್ಟೂರಿಗೆ ತಲುಪಿಸುವ ವ್ಯವಸ್ಥೆ ಮಾಡಲು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಟ್ವಿಟ್ ಮಾಡಿದ್ದಾರೆ.

“ಪ್ರವಾಸದ ವೇಳೆ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು. ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡುವಾಗ ಮಕ್ಕಳ ಮೇಲೆ ನಿಗಾವಹಿಸಿ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವನ್ನು ನಾನು ಅರ್ಥೈಸಿಕೊಳ್ಳ ಬಲ್ಲೆ. ಇಂತಹ ಅವಘಡ ಮತ್ತೆಂದೂ ಸಂಭವಿಸದಿರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದರು.

ಪ್ರಾಂಶುಪಾಲೆ ಅಮಾನತು
ಕೊತ್ತೂರಿನ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ ಅವರನ್ನು ನಿರ್ಲಕ್ಷ್ಯ, ಬೇಜವಾಬ್ದಾರಿ ಆರೋಪದಡಿ ಅಮಾನತು ಮಾಡಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶ ಹೊರಡಿಸಿದ್ದಾರೆ. ಅತಿಥಿ ಶಿಕ್ಷಕರಾದ ಚೌಡಪ್ಪ, ಶಾರದಮ್ಮ, ನರೇಶ್, ಸುನೀಲ್,‌ ವಿಶ್ವನಾಥ್, ಲಕ್ಷಮ್ಮ ಅವರನ್ನು ವಜಾ ಮಾಡಲಾಗಿದೆ.

ಸುಮೋಟೋ ಕೇಸ್
ಕೊತ್ತೂರಿನ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರ ವಿರುದ್ಧ ಮುರ್ಡೇಶ್ವರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ದುರ್ಘಟನೆಗೆ ನಿರ್ಲಕ್ಷ್ಯವೇ ಕಾರಣವೆಂದು ಮೊರಾರ್ಜಿ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕರಾದ ಆರ್.ಸುನೀಲ್, ಎಸ್.ಚೌಡಪ್ಪ, ಎಸ್.ವಿಶ್ವನಾಥ್, ಸಿ.ಎನ್.‌ಶಾರದಮ್ಮ ಮತ್ತು ಕೆ.ನರೇಶ್ ವಿರುದ್ಧ ಮುರ್ಡೇಶ್ವರ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಏನಿದು ಘಟನೆ?
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕೊತ್ತುರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ಸುಮಾರು 54 ವಿದ್ಯಾರ್ಥಿನಿಯರು ಸಂಜೆ ಕಡಲಿನಲ್ಲಿ ಆಟವಾಡಲು ಇಳಿದಿದ್ದರು. ಅಲೆಗಳ ಅಬ್ಬರ ಹೆಚ್ಚಿದ್ದರೂ ಶಿಕ್ಷಕರು ಮುನ್ನೆಚ್ಚರಿಕೆ ಕೈಗೊಳ್ಳದೆ ಮಕ್ಕಳನ್ನು ಸಮುದ್ರದಲ್ಲಿ ಆಟ ಆಡಲು ಬಿಟ್ಟಿದ್ದಾರೆ. ಈ ವೇಳೆ ಅಲೆಗಳ ಹೊಡೆತಕ್ಕೆ ಏಳು ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕ ನೀರುಪಾಲಾಗಿದ್ದರು. ಈ ಸಂದರ್ಭದಲ್ಲಿ ಲೈಫ್ ಗಾರ್ಡಗಳು ಯಾವುದೇ ಪರಿಕರ ಸಾಧನ ಇಲ್ಲದಿದ್ದರೂ ಮೂರು ಜನ ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕನನ್ನು ರಕ್ಷಣೆ ಮಾಡಿದ್ದರು. ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.

ಯಶೋಧಾ, ವೀಕ್ಷಣಾ, ಲಿಪಿಕಾರನ್ನು ರಕ್ಷಿಸಲಾಗಿದೆ. ಇವರಲ್ಲಿ ಓರ್ವಳ ಸ್ಥಿತಿ ಗಂಭೀರವಾಗಿದ್ದು ಮೂವರಿಗೂ ಮುರುಡೇಶ್ವರದ ಆರ್​​ಎನ್​ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾವಂತಿ, ದೀಕ್ಷಾ, ಲಾವಣ್ಯ, ವಂದನಾ ಮೃತ ದುರ್ದೈವಿಗಳು.


Share News

Comments are closed.

Exit mobile version