Friday, November 22
Share News

ಕೋಲ್ಕತಾ: ಪಶ್ಚಿಮಬಂಗಾಳದ ಹೌರಾ ಮೈದಾನ-ಎಸ್‌ ಪ್ಲಾಂಡೆ ಮಧ್ಯೆ ಹೂಗ್ಲಿ ನದಿಯ ಕೆಳಗೆ ನೀರಿನಾಳದಲ್ಲಿ ನಿರ್ಮಿಸಿರುವ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಮಾರ್ಚ್‌ 06) ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಪಶ್ಚಿಮಬಂಗಾಳದಲ್ಲಿ 15,400 ಕೋಟಿ ರೂಪಾಯಿ ಮೌಲ್ಯದ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮೆಟ್ರೋ ಸೇವೆಯು ಪಶ್ಚಿಮಬಂಗಾಳ ರಾಜಧಾನಿಯ ಅವಳಿ ನಗರಗಳಾದ ಹೌರಾ ಮತ್ತು ಸಾಲ್ಟ್‌ ಲೇಕ್‌ ಅನ್ನು ಸಂಪರ್ಕಿಸುತ್ತದೆ. ಆರು ನಿಲ್ದಾಣಗಳಲ್ಲಿ ಮೂರು ನಿಲ್ದಾಣ ನೀರಿನಾಳದಲ್ಲಿದೆ. ದೇಶದ ಮೊದಲ ಜಲ ಮೆಟ್ರೋ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸಿದ್ದರು.

ಮೆಟ್ರೋ ರೈಲಿನೊಳಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನಗುತ್ತಾ ಸಂವಹನ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಇದು ದೇಶದ ಮೊದಲ ನೀರಿನಾಳದ ಮೆಟ್ರೋ ಮಾರ್ಗ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೊಲ್ಕೊತ್ತಾ ಮೆಟ್ರೋದ 16.6 ಕಿಲೋಮೀಟರ್‌ ಉದ್ದದ ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗದಲ್ಲಿ 10.8 ಕಿಮೀ ಮಾರ್ಗ ಸುರಂಗದಲ್ಲಿದ್ದರೆ, 5.75 ಕಿಮೀ ಎತ್ತರಿಸಿದ ಮಾರ್ಗದಲ್ಲಿದೆ.
ಈ ಪೈಕಿ 4.8 ಕಿಮೀ ಹೌರಾ ಮೈದಾನ- ಎಸ್‌ಪ್ಲಾಂಡೆ ಮಧ್ಯೆ ಇದೆ. ಈ ಮಾರ್ಗ 6 ನಿಲ್ದಾಣಗಳನ್ನು ಹೊಂದಿದ್ದು ಈ ಪೈಕಿ ಮೂರು ಸುರಂಗದಲ್ಲಿ ಬರುತ್ತವೆ. ಹೂಗ್ಲಿ ನದಿಯ ಕೆಳಭಾಗದಲ್ಲಿ 520 ಮೀಟರ್‌ ಕ್ರಮಿಸಲು ಕೇವಲ 45 ಸೆಕೆಂಡ್‌ಗಳು ಸಾಕು. ಹೂಗ್ಲಿ ನಿಲ್ದಾಣ ದೇಶದ ಅತಿ ಆಳದ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಕಳೆದ ವರ್ಷದ ಏಪ್ರಿಲ್‌ನಲ್ಲೇ ಕೋಲ್ಕತಾ ಮೆಟ್ರೋ ಸುರಂಗ ಮಾರ್ಗದ ಹೂಗ್ಲಿ ನದಿಯ ಕೆಳಗೆ ನೀರಿನಾಳದಲ್ಲಿ ಮೆಟ್ರೋ ರೈಲು ಓಡಿಸುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಹೌರಾ-ಕೋಲ್ಕತಾ ಅವಳಿ ಸಿಟಿ ಸಂಪರ್ಕ ಸುಗಮವಾಗಲಿದೆ.

1984ರಲ್ಲೇ ಮೆಟ್ರೋ ಸಂಚಾರ ಆರಂಭ
ಕೋಲ್ಕತಾ ನಗರ 40 ವರ್ಷಗಳ ಹಿಂದೆಯೇ ಮೆಟ್ರೋ ಸೌಲಭ್ಯ ಹೊಂದಿತ್ತು. 1984ರಲ್ಲಿ ನೇತಾಜಿ ಭವನದಿಂದ ಎಸ್‌ಪ್ಲಾಂಡೆ ಮಧ್ಯೆ 3.4 ಕಿಲೋ ಮೀಟರ್‌ ಮೆಟ್ರೋ ಸಂಚಾರ ಆರಂಭವಾಗಿತ್ತು. ಈಗ ನೀರಿನಾಳದ ಮೆಟ್ರೋ ಮಾರ್ಗದ ಮೂಲಕ ಮತ್ತೂಂದು ಹೊಸ ಐತಿಹಾಸಿಕ ಬೆಳವಣಿಗೆಗೆ ಪಶ್ಚಿಮ ಬಂಗಾಳದ ರಾಜಧಾನಿ ಸಾಕ್ಷಿಯಾಗಿದೆ.


Share News

Comments are closed.

Exit mobile version