Friday, November 22
Share News

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ 5,8,9 ಮತ್ತು 11ನೇ ತರಗತಿಗಳಿಗೆ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಪಬ್ಲಿಕ್‌ ಪರೀಕ್ಷೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರ ಜಂಟಿಯಾಗಿ ಹೊರಡಿಸಿದ್ದ ಬೋರ್ಡ್‌ ಎಕ್ಸಾಂ ಸುತ್ತೋಲೆಯನ್ನು ರದ್ದು ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಹೀಗಾಗಿ ಈ ಬಾರಿ ಈ ಕ್ಲಾಸ್‌ಗಳಿಗೆ ಬೋರ್ಡ್‌ ಎಕ್ಸಾಂ ಇರುವುದಿಲ್ಲ.

ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ ಸಿ ನಾಗೇಶ್ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಮಾದರಿಯ ಮೌಲ್ಯಾಂಕನ ಪರೀಕ್ಷೆ ಜಾರಿಗೆ ತಂದಿದ್ದರು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಬೋರ್ಡ್‌ ಎಕ್ಸಾಮ್‌ ನಡೆಸುವ ಚಿಂತನೆ ಮಾಡಲಾಗಿತ್ತು.

9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್‌ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಂಭೀರತೆ ಕಾಣಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ ಅವರ ವಾದವಾಗಿತ್ತು.

ಆದರೆ, 2023ರ ಡಿಸೆಂಬರ್ ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು. ವಾದ ಆಲಿಸಿದ ಹೈಕೋರ್ಟ್ ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ಸುದರ್ಶನ್ ವಾದ ಮಂಡಿಸಿದ್ದರು.

ಇದೀಗ ಹೈಕೋರ್ಟ್‌ ಪರೀಕ್ಷೆ ಸುತ್ತೋಲೆಯನ್ನು ರದ್ದು ಮಾಡಿರುವುದರಿಂದ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ತಕ್ಷಣಕ್ಕೆ ಮೇಲ್ಮನವಿ ಸಲ್ಲಿಸಿ ಪರೀಕ್ಷೆ ನಡೆಸುವ ಸಾಧ್ಯತೆ ಕಡಿಮೆ ಇರುವುದರಿಂದ ಈ ವರ್ಷದ ಮಟ್ಟಿಗೆ ಪಬ್ಲಿಕ್‌ ಪರೀಕ್ಷೆ ಇರಲಿಕ್ಕಿಲ್ಲ ಎನ್ನಲಾಗುತ್ತಿದೆ.

ಈಗ‌ ರಾಜ್ಯದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಗೆ ಮಾತ್ರ ಪಬ್ಲಿಕ್ ಎಕ್ಸಾಮ್‌ ನಡೆಸಲಾಗುತ್ತಿದೆ. 9ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವ ಪದ್ಧತಿ ಇಲ್ಲ.

ಖಾಸಗಿ ಶಾಲೆಗಳ ವಾದ

ರಾಜ್ಯ ಶಿಕ್ಷಣ ಇಲಾಖೆ ಶಿಕ್ಷಣ ಕಾಯಿದೆಯಡಿ 2023ರ ಅಕ್ಟೋಬರ್ 6 ಮತ್ತು 9 ರಂದು ಎರಡು ಸುತ್ತೋಲೆಗಳನ್ನ ಹೊರಡಿಸಿತ್ತು ಇದನ್ನು ಪ್ರಶ್ನಿಸಿದ್ದ ಅರ್ಜಿದಾರರ‌ ಸಂಘ, ಶಿಕ್ಷಣ ಇಲಾಖೆ ಸುತ್ತೋಲೆ ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ. ಆದರೆ, ಬೋರ್ಡ್ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಸಿದ್ಧಪಡಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಖಾಸಗಿ ಶಾಲೆಗಳ ಪಠ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಪಠ್ಯಕ್ರಮ ವಿಭಿನ್ನವಾಗಿವೆ. ಕಲಿಕಾ ಚೇತರಿಕೆ ಪಠ್ಯಕ್ರಮದ ಪ್ರಶ್ನೆಗಳಿಗೆ ಖಾಸಗಿ ಶಾಲಾ ಮಕ್ಕಳು ಉತ್ತರಿಸಲು ಕಷ್ಟ. ಹೀಗಾಗಿ ಎಲ್ಲ ಮಕ್ಕಳಿಗೂ ಅನ್ವಯವಾಗುವಂತೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ಅವಕಾಶ ನೀಡಬಾರದು.

ಶಿಕ್ಷಣ ಇಲಾಖೆಯ ವಾದ:
ಕಲಿಕಾ ಚೇತರಿಕೆ ಕೂಡಾ ಪಠ್ಯಕ್ರಮದ ಭಾಗವೇ ಆಗಿದೆ. ಸಾಮಾನ್ಯ ಪಠ್ಯಕ್ರಮದಿಂದಲೇ ಕಲಿಕಾ ಚೇತರಿಗೆ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಮಕ್ಕಳ ಬುದ್ಧಿಮತ್ತೆಯನ್ನು ಸಕಾರಾತ್ಮಕವಾಗಿ ವೃದ್ಧಿಸುವ ನಿಟ್ಟಿನಲ್ಲಿ ಇದನ್ನು ರೂಪಿಸಲಾಗಿದೆ. ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಲ್ಲ. ಹಾಗಾಗಿ, ಬೋರ್ಡ್ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಪಡೆದುಕೊಂಡಿರುವುದು ಸರಿಯಿದೆ. ಅದರಂತೆ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರದ ಪರ ವಕೀಲರು ಸಮರ್ಥಿಸಿಕೊಂಡಿದ್ದರು.


Share News

Comments are closed.

Exit mobile version