ಭಾರತಕ್ಕೆ ಭೇಟಿ ನೀಡಲಿದ್ದಾರೆ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಮುತ್ತಖಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ತಾಲಿಬಾನ್ ನಿರ್ಬಂಧ ಸಮಿತಿಯು ಪ್ರಯಾಣ ನಿಷೇಧ ವಿನಾಯಿತಿಯನ್ನು ಅನುಮೋದಿಸಿದ ನಂತರ ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಿಂದ ಭಾರತಕ್ಕೆ ಸಚಿವರ ಮಟ್ಟದ ಮೊದಲ ಭೇಟಿ ಇದಾಗಿದೆ. ಮುತ್ತಖಿಯನ್ನು ತಾಲಿಬಾನ್‌ನ ಪ್ರಮುಖ ಸದಸ್ಯ ಎಂದು ಪರಿಗಣಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ತಾಲಿಬಾನ್ ನಿರ್ಬಂಧ ಸಮಿತಿಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲಾ 15 ಸದಸ್ಯರನ್ನು ಒಳಗೊಂಡಿದೆ.
ಭಾರತ ಹಾಗೂ ಅಫ್ಘಾನಿಸ್ತಾನ(Afghanistan)ದ ನಡುವಿನ ಸಂಬಂಧಗಳನ್ನು ಬಲಪಡಿಸುವ ಸಲುವಾಗಿ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 9-10ರಂದು ಮುತ್ತಕಿ ಭಾರತದಲ್ಲಿರಲಿದ್ದಾರೆ. ಆಗಸ್ಟ್‌ನಲ್ಲಿ ಅವರು ಭಾರತಕ್ಕೆ ಭೇಟಿ ನೀಡಬೇಕಿತ್ತು, ಮೂಲಗಳು ಈಗ ಅವರ ಆಗಮನವನ್ನು ದೃಢಪಡಿಸಿವೆ. ಡುರಾಂಡ್ ರೇಖೆಯ ಮೇಲೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಗಮನಾರ್ಹವಾಗಿ ಹೆಚ್ಚಾಗಿದೆ.
ತೆಹೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗೆ ಅಫ್ಘಾನಿಸ್ತಾನ ರಕ್ಷಣೆ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದೆ ಮತ್ತು ಇತ್ತೀಚೆಗೆ ಪಾಕಿಸ್ತಾನದಿಂದ ಗಡಿಯಾಚೆಗಿನ ವಾಯುದಾಳಿಗಳು ನಡೆದಿವೆ, ಇದನ್ನು ತಾಲಿಬಾನ್ ನಾಯಕತ್ವ ಬಲವಾಗಿ ವಿರೋಧಿಸಿದೆ.
ಭಾರತವು ಅಫ್ಘಾನಿಸ್ತಾನಕ್ಕೆ ತನ್ನ ಸಾಮೀಪ್ಯವನ್ನು ಹೆಚ್ಚಿಸಿಕೊಂಡಿದೆ. ಈ ಅವಧಿಯಲ್ಲಿ ಭಾರತವು ಅಫ್ಘಾನಿಸ್ತಾನದೊಂದಿಗಿನ ತನ್ನ ಸಂಬಂಧವನ್ನು ಇನ್ನಷ್ಟು ಬಲಪಡಿಸಿದೆ. ಸಚಿವ ಹಮ್ಹುಲ್ಲಾ ಜಾಹಿದ್ ಸೇರಿದಂತೆ ಹಲವಾರು ಪ್ರಮುಖ ಅಫ್ಘಾನ್ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಅವರು ಸುಮಾರು ಒಂದು ತಿಂಗಳ ಕಾಲ ಭಾರತದಲ್ಲಿದ್ದರು. ಭಾರತವು ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಗುರುತಿಸಿಲ್ಲ, ಆದರೆ ತಾಲಿಬಾನ್ ಆಡಳಿತದೊಂದಿಗೆ ನಿಯಮಿತ ಸಂಪರ್ಕವನ್ನು ಉಳಿಸಿಕೊಂಡಿದೆ, ಕಾಬೂಲ್‌ನಲ್ಲಿ ರಾಯಭಾರ ಕಚೇರಿಯನ್ನು ತೆರೆಯಿತು ಮತ್ತು ವಿವಿಧ ರೀತಿಯ ಮಾನವೀಯ ನೆರವು ನೀಡುತ್ತಿದೆ.
ಭಾರತವು ಅಫ್ಘಾನ್ ರಾಜತಾಂತ್ರಿಕರಿಗಾಗಿ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಹಲವಾರು ಕಾನ್ಸುಲೇಟ್ ಜನರಲ್‌ಗಳನ್ನು ತೆರೆದಿದೆ. ದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯನ್ನು ಚಾರ್ಜ್ ಡಿ’ಅಫೇರ್ಸ್ ಮುಹಮ್ಮದ್ ಇಬ್ರಾಹಿಂ ಖಿಲ್ ನೇತೃತ್ವ ವಹಿಸಿದ್ದಾರೆ, ಅವರು ಅಶ್ರಫ್ ಘನಿ ಸರ್ಕಾರದ ನಂತರ ಅಲ್ಲಿ ನೆಲೆಸಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮುತ್ತಕಿ ಅವರೊಂದಿಗೆ ಮಾತನಾಡಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಮುತ್ತಕಿ ಖಂಡಿಸಿದ್ದನ್ನು ಅವರು ಶ್ಲಾಘಿಸಿದರು ಮತ್ತು ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ಅಪನಂಬಿಕೆಯನ್ನು ಸೃಷ್ಟಿಸುತ್ತಿರುವ ತಪ್ಪು ಮಾಹಿತಿಯನ್ನು ಬಲವಾಗಿ ಖಂಡಿಸಿದರು.