ಪುತ್ತೂರು: 300 ಬೆಡ್’ನ ಸರಕಾರಿ ಮೆಡಿಕಲ್ ಆಸ್ಪತ್ರೆ ಸೇಡಿಯಾಪಿಗೆ ಸ್ಥಳಾಂತರಗೊಳ್ಳದೇ, ಪುತ್ತೂರಿನ ಹೃದಯ ಭಾಗದಲ್ಲಿರುವ ಈಗಿನ ಸರಕಾರಿ ಆಸ್ಪತ್ರೆಯ 5.16 ಸೆಂಟ್ಸ್ ಜಾಗದಲ್ಲೇ ಇರಬೇಕು ಎಂದು ಆರೋಗ್ಯ ರಕ್ಷಾ ಸಮಿತಿಯ ನಿಕಟಪೂರ್ವ ಸದಸ್ಯ ರಫೀಕ್ ದರ್ಬೆ ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನ ಜನರ ಬೇಡಿಕೆಯಂತೆ ಮೆಡಿಕಲ್ ಕಾಲೇಜಿಗಾಗಿ ಹಿಂದೆ ಶಾಸಕರಾಗಿದ್ದ ಸಂಜೀವ ಮಠಂದೂರು ಅವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಮೆಡಿಕಲ್ ಕಾಲೇಜು ಆಗಬೇಕಾದರೆ 300 ಬೆಡ್’ನ ಸರಕಾರಿ ಆಸ್ಪತ್ರೆ ಇರಬೇಕು ಹಾಗೂ ಅದಕ್ಕಾಗಿ 5 ಎಕರೆಗಿಂತ ಹೆಚ್ಚು ಜಾಗ ಇರಬೇಕು. ಹಾಗಾಗಿ ಸರಕಾರಿ ಆಸ್ಪತ್ರೆಯ ಸುತ್ತಮುತ್ತಲಿದ್ದ ರಿಜಿಸ್ಟ್ರಾರ್ ಆಫೀಸ್, ತಾಲೂಕು ಕಚೇರಿ, ಕಾರಾಗೃಹ ಮೊದಲಾದ ಸರಕಾರಿ ಜಾಗಗಳನ್ನು ಇದಕ್ಕೆ ಸೇರಿಸಲಾಯಿತು. ಈ ಜಾಗ ಜನರ ಅನುಕೂಲದ ದೃಷ್ಟಿಯಿಂದ ಪ್ರಶಸ್ತವಾಗಿದೆ. ಆದ್ದರಿಂದ ಸೇಡಿಯಾಪಿಗೆ 300 ಬೆಡ್ ನ ಆಸ್ಪತ್ರೆ ಸ್ಥಳಾಂತರ ಆಗಬಾರದು ಎಂದು ಸಮರ್ಥಿಸಿದರು.
ಆರೋಗ್ಯ ರಕ್ಷಾ ಸಮಿತಿಯ ಇನ್ನೋರ್ವ ನಿಕಟಪೂರ್ವ ಸದಸ್ಯ ರಾಜೇಶ್ ಬನ್ನೂರು ಮಾತನಾಡಿ, ಸರಕಾರಿ ಆಸ್ಪತ್ರೆ ಪುತ್ತೂರು ನಗರದಲ್ಲೇ ಇರುವುದು ಉತ್ತಮ. ಇದನ್ನು ಸೇಡಿಯಾಪಿಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಾ ಇದೆ. ಅಲ್ಲಿರುವ 19-20 ಎಕರೆ ಜಾಗ ರಕ್ಷಿತಾರಣ್ಯದ ಜಾಗ ಎನ್ನುವುದನ್ನು ತಿಳಿದುಕೊಳ್ಳಬೇಕು. ಆದ್ದರಿಂದ ವೈದ್ಯಕೀಯ ಕಾಲೇಜು ಪುತ್ತೂರಿಗೆ ಮಂಜೂರು ಆಗುತ್ತದೋ ಇಲ್ಲವೋ ಎನ್ನುವುದರ ಬಗ್ಗೆ ಅನುಮಾನವಿದೆ. ಆದರೆ 300 ಬೆಡ್ ನ ಆಸ್ಪತ್ರೆ ಸೇಡಿಯಾಪಿಗೆ ಸ್ಥಳಾಂತರ ಆಗಬಾರದು ಎಂದರು.
ಬೆಂಚ್ ಮಾರ್ಕ್:
ಬೆಂಚ್ ಮಾರ್ಕ್ ಕೆಲಸ ಎಂದು ಹೇಳಿಕೊಳ್ಳುತ್ತಾರೆ. ಆದರೆ ಬೆಂಚ್ ಮಾರ್ಕ್ ಕೆಲಸ ಮಾಡಿದ್ದರೆ ಅದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಕಾರ್ಯವೈಖರಿ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಗಬೇಕೆಂದು ಜಾಗವನ್ನು ಮಂಜೂರು ಮಾಡಿರುವವರು ಅವರು ಎಂದು ರಾಜೇಶ್ ಬನ್ನೂರು ಹೇಳಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಆರೋಗ್ಯ ರಕ್ಷಾ ಸಮಿತಿಯ ನಿಕಟಪೂರ್ವ ಸದಸ್ಯೆ ವಿದ್ಯಾಗೌರಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪಿರಿಯತ್ತೋಡಿ ಉಪಸ್ಥಿತರಿದ್ದರು.























