ಶಿಕ್ಷಣ

ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಯುವದಿನಾಚರಣೆ | ಪ್ರಾಮಾಣಿಕವಾದ ದೇಶಭಕ್ತಿ ಮೂಡಿಬರಬೇಕು: ಶ್ರೀಕೃಷ್ಣ ಉಪಾಧ್ಯಾಯ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವ ದಿನ ಎಂದು ಕರೆಯುವುದಕ್ಕೆ ಕಾರಣವಿದೆ. ದೇಶವನ್ನು ಕಟ್ಟುವ ನಿಟ್ಟಿನಲ್ಲಿ ವಿವೇಕಾನಂದರು ಕರೆಯನ್ನು ಕೊಡುವ ಸಂದರ್ಭದಲ್ಲಿ ಅವರು ಕೇಳಿದ್ದು ಉಕ್ಕಿನ ನರಮಂಡಲ ಇರುವ ವಿದ್ಯುತ್ತಿನ ಶಕ್ತಿಯಷ್ಟು ಪ್ರಬಲವಾದ, ಚೈತನ್ಯದಿಂದ ಕೂಡಿದ ನೂರು ಜನ ಯುವಕರನ್ನು. ಹಾಗಾಗಿಯೇ ಅವರ ಜನ್ಮ ದಿನವನ್ನು ಯುವ ದಿನಾಚರಣೆ ಎಂದು ಗುರುತಿಸಲಾಗುತ್ತದೆ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ತೆಯಲ್ಲಿ ಸೋಮವಾರದಂದು ನಡೆದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಪ್ರಯುಕ್ತದ ಯುವ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬಾವುಟವನ್ನು ಹಾರಿಸಿ, ಘೋಷಣೆಗಳನ್ನು ಕೂಗಿ, ಮೆರವಣಿಗೆಯನ್ನು ತೋರಿಕೆಗಾಗಿ ಮಾಡಿದರೆ ಅದು ದೇಶಭಕ್ತಿ ಎಂದೆನಿಸಿಕೊಳ್ಳುವುದಿಲ್ಲ. ಅಂತೆಯೇ ಭಾಷಣವನ್ನು ಕೇಳಿ ಚಪ್ಪಾಳೆಯನ್ನು ತಟ್ಟುವುದು ಕೂಡ ಇದಕ್ಕೆ ಹೊರತೇನಲ್ಲ, ಅದರ ಬದಲಿಗೆ ಆ ವಿಷಯಗಳಿಂದ ಪ್ರೇರಣೆ ಮೂಡಿ ಕಾರ್ಯಕ್ಕೆ ತೊಡಗಬೇಕು. ನಿಜವಾದ ದೇಶಭಕ್ತಿ ಎಂದರೆ ದೇಶವನ್ನು ಕಟ್ಟುವುದು ಎಂದರ್ಥ. ಪೊಲೀಸ್, ವೈದ್ಯ, ಶಿಕ್ಷಕ, ರಾಜಕಾರಣಿ ಹೀಗೆ ಹಲವು ಉದ್ಯೋಗಗಳಿವೆ, ಇವರೆಲ್ಲರೂ ತಮ್ಮ ವೃತ್ತಿಯನ್ನು ಸ್ವಚ್ಛ ಮನಸ್ಸಿನಿಂದ, ಪ್ರಾಮಾಣಿಕತೆಯನ್ನು ಮೆರೆದರೆ ಅದೇ ನಾವು ದೇಶಕ್ಕೆ ಕೊಡುವ ಕೊಡುಗೆಯಾಗಿದೆ. ಇದೇ ನಿಜವಾದ ದೇಶಭಕ್ತಿ ಎಂದು ತಿಳಿಸಿದರು.

ವಿವೇಕಾನಂದರು ಹೇಳಿದ 4 ತತ್ವಗಳಾದ ವ್ರತದ ಪಾಲನೆ, ದೇಹದಲ್ಲಿ ಶಕ್ತಿ, ಬೌದ್ಧಿಕ ಶಕ್ತಿ,  ಸಂಸ್ಕಾರ  ತತ್ವ ಇವುಗಳು ವಿದ್ಯಾರ್ಥಿ ಜೀವನಕ್ಕೆ ತುಂಬಾ ಮುಖ್ಯ ಎಂದರಲ್ಲದೆ ಗುರು ಭಕ್ತಿ ಇಲ್ಲದೆ ವಿದ್ಯೆಯು ಒಲಿಯುವುದಿಲ್ಲ. ಮಾತೆ ಹಾಗೂ ಮಾತೃಭೂಮಿಯನ್ನು ಪ್ರೀತಿಸಬೇಕು. ಪರಂಪರೆಯನ್ನು ಬೆಳಗಿಸಬೇಕು. ದೇವರ ಮೇಲೆ ಭಕ್ತಿ, ಶ್ರದ್ಧೆ, ಸಂಸ್ಕಾರ, ಒಳ್ಳೆಯ ಮನಸ್ಸು ಇರಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ ವಿದ್ಯೆ, ಬದುಕು ಇದರ ಬಗ್ಗೆ ಕಾಳಜಿಯನ್ನು ವಹಿಸಬೇಕು. ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳುವಲ್ಲಿ  ಸ್ವಾಮಿ ವಿವೇಕಾನಂದರ ಮೌಲ್ಯಗಳು ನಮಗೆ ಪ್ರೇರಣೆಯಾಗಬೇಕು. ಪ್ರತಿನಿತ್ಯವೂ ನಾಡಿನ ಸಂತರ ಕಥೆಯನ್ನು ಓದಿ, ಕೇಳಿ ಅವರ ಪ್ರೇರಣಾತ್ಮಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು  ಜೀವನವನ್ನು ಚೆನ್ನಾಗಿ ಕಟ್ಟಿಕೊಳ್ಳುವುದರ ಮೂಲಕ ಮಾನವ ಜನ್ಮವನ್ನು ಸಾರ್ಥಕ ಗೊಳಿಸಬೇಕು ಎಂದರು.

ವಿದ್ಯಾರ್ಥಿನಿ ಪ್ರಾರ್ಥನಾ ವಿವೇಕಾನಂದರ ಜೀವನ ಮೌಲ್ಯದ ಕುರಿತು ತಿಳಿಸಿದರು. ಚಿಕಾಗೋ ಸಮ್ಮೇಳನದ ಸನ್ನಿವೇಶವನ್ನು ಶ್ರೀಯಂ ಕೆ.ಎಸ್ ಇವರು ಸ್ವಗತದ ರೂಪದಲ್ಲಿ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಾದ ಸನ್ಮಯ್ ಎನ್, ಶ್ರೀರಾಮ, ಶೌರಿ, ಮೋಕ್ಷ್, ಯಶಸ್ ಮಯೂರ್, ಮಯಾಂಕ್, ಪ್ರದ್ವಿನ್ ಇವರು ವಿವೇಕಾನಂದರ ಕುರಿತು ಸಮೂಹ ಗಾನವನ್ನು ಹಾಡಿದರು.

ವಿದ್ಯಾರ್ಥಿ ಶ್ರೀವತ್ಸ  ಸ್ವಾಗತಿಸಿ, ವಿದ್ಯಾರ್ಥಿನಿ ಲಾವಣ್ಯ ಪಟ್ಟೆ ವಂದಿಸಿದರು. ವಿದ್ಯಾರ್ಥಿ ಆದಿಶ್ರೀ ಪ್ರಾರ್ಥಿಸಿ, ಮನಿಷಾ ಕಜೆ ಹಾಗೂ ಕೀರ್ತಿಕಾ ಕಾರ್ಯಕ್ರಮ ನಿರ್ವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಶತಮಾನೋತ್ಸವ ಪಥದತ್ತ ಬನ್ನೂರು ಹಿ.ಪ್ರಾ. ಶಾಲೆ | ಜ. 4ಕ್ಕೆ ಶಾಲಾ ಶತಮಾನೋತ್ಸವಕ್ಕೆ ಚಾಲನೆ ಹಾಗೂ ಕಾಮಗಾರಿಗಳ ಶಿಲಾನ್ಯಾಸ

ಪುತ್ತೂರು: ಶತಮಾನದ ಹೊಸ್ತಿಲಲ್ಲಿರುವ ಬನ್ನೂರು ಹಿ.ಪ್ರಾ. ಶಾಲೆಯಲ್ಲಿ ಶಾಲಾ ಶತಮಾನೋತ್ಸವಕ್ಕೆ…