ಮಂಗಳೂರು: ರಾಜ್ಯಾದ್ಯಂತ ಶೈಕ್ಷಣಿಕ ಕ್ಯಾಲೆಂಡರ್ ಯಥಾಸ್ಥಿತಿಗೆ ಬರುತ್ತಿದೆ ಎಂಬ ಆಶಾಭಾವ ಇರುವಾಗಲೇ ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ವಿಳಂಬದಿಂದಾಗಿ ಸೆಮಿಸ್ಟರ್ ಅವಧಿಯನ್ನೇ ಒಂದು ತಿಂಗಳು ಮುಂದೂಡಿರುವುದರಿಂದ ಇಡೀ ಪದವಿ ಶಿಕ್ಷಣ ವ್ಯವಸ್ಥೆಗೆ ಮತ್ತೊಮ್ಮೆ ಕೊರೊನಾ ಕಾಲದ ಹೊಡೆತದ ಭೀತಿ ಎದುರಾದಂತಾಗಿದೆ.
ಕೊರೊನಾ ಮುನ್ನ ಜೂನ್‌ನಲ್ಲಿ ಪದವಿ ಕಾಲೇಜುಗಳು ಆರಂಭವಾಗುತ್ತಿದ್ದವು. ಕೊರೊನಾ ಕಾರಣದಿಂದ ಇದು ಮುಂದೂಡಿಕೆಯಾಗಿ ಇಡೀ ಶೈಕ್ಷಣಿಕ ವೇಳಾಪಟ್ಟಿಯೇ ಹಳಿ ತಪ್ಪಿತ್ತು. ಒಂದೊಂದು ವಿ.ವಿ. ವ್ಯಾಪ್ತಿಯಲ್ಲಿ ಸುಮಾರು 2 ತಿಂಗಳ ಅಂತರವಿದ್ದು ಪ್ರತ್ಯೇಕ ವೇಳಾಪಟ್ಟಿ ಇತ್ತು. ಇದರ ಮಧ್ಯೆ ಏಕರೂಪದ ವೇಳಾಪಟ್ಟಿ ಬಗ್ಗೆ ಸರ್ಕಾರ ಪ್ರಸ್ತಾವಿಸುತ್ತಿದ್ದರೂ ಜಾರಿಯಾಗಿಲ್ಲ.
ಮೈಸೂರು ವಿ.ವಿ. ವ್ಯಾಪ್ತಿಯಲ್ಲಿ ಈ ವರ್ಷ ಜೂ.30ಕ್ಕೆ ಕಾಲೇಜು ಆರಂಭವಾದರೆ, ತುಮಕೂರು ವಿ.ವಿ. ವ್ಯಾಪ್ತಿಯಲ್ಲಿ ಆ. 18, ಮಂಗಳೂರು ವಿ.ವಿ.ಯಲ್ಲಿ ಜು.28, ಬೆಂಗಳೂರು ವಿ.ವಿ. ಜು.11, ಕರ್ನಾಟಕ ವಿ.ವಿ.ಯಲ್ಲಿ ಆ.11… ಹೀಗೆ ವಿವಿಧ ದಿನಾಂಕಗಳಲ್ಲಿ ಕಾಲೇಜು ಆರಂಭವಾಗಿದೆ. ಇಲ್ಲೆಲ್ಲ ಮೊದಲ ಸೆಮಿಸ್ಟರ್ ಕೊನೆಗೊಳ್ಳುವ ದಿನಾಂಕದಿಂದ ಒಂದು ತಿಂಗಳು ವಿಸ್ತರಿಸಲಾಗಿದೆ.
ಪದವಿ ಪ್ರಕ್ರಿಯೆ ಅಸ್ತವ್ಯಸ್ತ!:
ಅತಿಥಿ ಉಪನ್ಯಾಸಕರ ನೇಮಕ ವಿಳಂಬದಿಂದಾಗಿ ಆದ ವಿಸ್ತರಣೆಯಿಂದ ಕಾಲೇಜು ಶಿಕ್ಷಣದ ಎಲ್ಲ ಪ್ರಕ್ರಿಯೆ 1 ತಿಂಗಳು ಮುಂದೆ ಹೋಗಲಿವೆ. ಈ ಮಧ್ಯೆ ಈಗಾಗಲೇ ವಿ.ವಿ. ವ್ಯಾಪ್ತಿಯ ಶೈಕ್ಷಣಿಕ ತರಗತಿಗಿಂತ ಸುಮಾರು 1 ತಿಂಗಳು ಮುನ್ನ ಇರುವ ಸ್ವಾಯತ್ತ ವಿ.ವಿ. ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು 2 ತಿಂಗಳು ಮೊದಲೇ ಪದವಿ ಮುಗಿಸಿ ಮುಂದಿನ ಅವಕಾಶಕ್ಕೆ ಸಜ್ಜಾಗುತ್ತಾರೆ. ಆದರೆ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಶಿಕ್ಷಣ, ಉದ್ಯೋಗಕ್ಕೆ ತೆರಳುವಲ್ಲಿ ಎರಡು ತಿಂಗಳು ತಡವಾಗಲಿದೆ.
ಕಾಲೇಜು ಮರು ಆರಂಭಕ್ಕೆ ವಿಘ್ನ:
ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಈ ಸಾಲಿನ ಮೊದಲ ಸೆಮಿಸ್ಟರ್ ನ.20ಕ್ಕೆ ಕೊನೆಗೊಳ್ಳಬೇಕಿತ್ತು. ಅದೀಗ ಡಿ. 20 ಕ್ಕೆ ಮುಗಿಯಲಿದೆ. ಪರೀಕ್ಷೆ ಜನವರಿಯಲ್ಲಿ ಆಗಬೇಕು. ರಜಾ ಅವಧಿ ಕಡಿತಗೊಳಿಸುವಂತೆ ಸರ್ಕಾರ ಸದ್ಯ ತಿಳಿಸಿದರೂ ಪರೀಕ್ಷೆ ಅವಧಿ ಬಿಟ್ಟು ರಜೆ ಅವಧಿ ಲಭ್ಯವಿಲ್ಲ. ಪರೀಕ್ಷಾ ಅವಧಿಯು ಶಿಕ್ಷಕರು/ವಿದ್ಯಾರ್ಥಿಗಳಿಗೆ ಅತೀ ಅಗತ್ಯವಿದ್ದು, ಕಡಿತ ಮಾಡುವಂತಿಲ್ಲ. ಪರಿಣಾಮವಾಗಿ 2026 27ರ ಶೈಕ್ಷಣಿಕ ಅವಧಿ ಪ್ರಾರಂಭ 1 ತಿಂಗಳು ತಡವಾಗಲಿದೆ. ಮಾರ್ಚ್ ಏಪ್ರಿಲ್ ನಲ್ಲಿ ದ್ವಿತೀಯ ಪಿಯು ಫಲಿತಾಂಶ ಬಂದರೂ ಪದವಿ ತರಗತಿಗೆ ಆಗಸ್ಟ್ ವರೆಗೆ ಕಾಯಬೇಕಾಗಬಹುದು ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲರು.
ಈ ಮಧ್ಯೆ ಖಾಸಗಿ ಕಾಲೇಜುಗಳಲ್ಲಿ ಪಾಠ ಪೂರ್ಣ ಮಟ್ಟದಲ್ಲಿ ನಡೆಯುತ್ತಿದೆ. ಪರೀಕ್ಷೆಗೆ ದಿನ ಸಮೀಪಿಸುತ್ತಿದ್ದು, ತಯಾರಿಯೂ ಅಂತಿಮ ಹಂತದಲ್ಲಿ ನಡೆಯುತ್ತಿದೆ. ಆದರೆ ಈ ಸಂದರ್ಭದಲ್ಲಿ ಎಲ್ಲ ಕಾಲೇಜುಗಳ ಸೆಮಿಸ್ಟರ್ ಗಳ ಅವಧಿಯನ್ನು ಮುಂದೂಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಕಾಲೇಜು ಶೈಕ್ಷಣಿಕ ವೇಳಾಪಟ್ಟಿ 1 ತಿಂಗಳು ವಿಸ್ತರಿಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಅತಿಥಿ ಉಪನ್ಯಾಸಕರ ನೇಮಕ ವಿಳಂಬ ಇದಕ್ಕೆ ಕಾರಣ. ಇದರಿಂದ ಮುಂದಿನ ಪ್ರವೇಶಾತಿ ಮತ್ತೆ 1 ತಿಂಗಳು ತಡವಾಗಲಿದೆ. ಒಟ್ಟು ಗೊಂದಲದ ಪರಿಸ್ಥಿತಿ. ಪದವಿಗೆ ಮಕ್ಕಳು ಕಡಿಮೆ ಆಗುತ್ತಿದ್ದಾರೆ ಎಂಬ ಸಂಕಟದ ಮಧ್ಯೆ ಇಂತಹ ಬೆಳವಣಿಗೆಗಳಿಂದ ಮತ್ತಷ್ಟು ಸಮಸ್ಯೆ ಆಗಲಿದೆ ಎನ್ನುತ್ತಾರೆ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘ (ಅಮುಕ್ತ) ಅಧ್ಯಕ್ಷ ಎಸ್.ಎ. ಮಂಜುನಾಥ್.
ಅತಿಥಿ ಉಪನ್ಯಾಸಕರ ನೇಮಕ ವಿಷಯ ಇನ್ನೂ ಸಂಪೂರ್ಣ ಬಗೆಹರಿದಿಲ್ಲ. ಯಾಕೆಂದರೆ, ಸದ್ಯದ ನೇಮಕ ಕೇವಲ ಮೊದಲ ಸೆಮಿಸ್ಟರ್ ಗೆ ಮಾತ್ರ ಅನ್ವಯ. ಅನಂತರದ ಸೆಮಿಸ್ಟರ್ ಗೆ ಹೊಸದಾಗಿ ನೇಮಕ ಪ್ರಕ್ರಿಯೆ ನಡೆಯಬೇಕು. ಆಗಲೂ ವಿಳಂಬವಾದರೆ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕಲಿದೆ.
ಇದೀಗ ಅತಿಥಿ ಉಪನ್ಯಾಸಕರ ನೇಮಕ ನಡೆದಿರುವುದರಿಂದ ಶನಿವಾರ, ಭಾನುವಾರ ವಿಶೇಷ ತರಗತಿ, ಕಾಲೇಜು ದಿನಗಳಲ್ಲಿ ವಿಶೇಷ ತರಗತಿಗಳನ್ನು ಮಾಡುವ ಮೂಲಕ ಬಾಕಿ ಇರುವ ಪಠ್ಯವನ್ನು ನಿಗದಿತ ಅವಧಿಯೊಳಗೆ ಪೂರೈಸಬಹುದು. ಸರ್ಕಾರ 1 ತಿಂಗಳು ಹೆಚ್ಚುವರಿ ಸಮಯ ನೀಡಿದ್ದರೂ ಅದರ ಒಳಗೆ ಪಠ್ಯ ಪೂರೈಸುವ ಅವಕಾಶವಿದೆ. ಮುಂದಿನ ಸೆಮಿಸ್ಟರ್ ಸಮ ಸಂಖ್ಯೆಯ ಸೆಮಿಸ್ಟರ್ ಆಗಿರುವುದರಿಂದ ಸೆಮಿಸ್ಟರ್ ಕೊನೆಗೆ ಹೆಚ್ಚಿನ ರಜಾ ಸಮಯ ಇದ್ದು ಅದನ್ನು ಬಳಸಿಕೊಳ್ಳಲು ಸಾಧ್ಯವಿದೆ. ಡಾ. ಜಯಕರ್ ಎಸ್ ಎಂ, ಕುಲಪತಿ ಬೆಂಗಳೂರು ವಿವಿ.
ಸೆಮಿಸ್ಟರ್ 1 ತಿಂಗಳು ವಿಸ್ತರಣೆ ಮಾಡುವಂತೆ ಸರ್ಕಾರದಿಂದ ನಿರ್ದೇಶನ ಬಂದಿದೆ. ಸರ್ಕಾರ ತಿಳಿಸಿದಂತೆ ನಾವು ಇದನ್ನು ಅನುಷ್ಠಾನಿಸಲಿದ್ದೇವೆ. – ಪ್ರೊ.ಪಿ.ಎಲ್. ಧರ್ಮ, ಕುಲಪತಿ, ಮಂಗಳೂರು ವಿವಿ ದಿನೇಶ್ ಇರಾ