ಪುತ್ತೂರು: ವಿಮರ್ಷಾತ್ಮಕ ಚಿಂತನೆ, ಜೀವನ ಪರ್ಯಂತ ಕಲಿಕೆ, ಸಂವಹನ ಹಾಗೂ ಅವಿಷ್ಕಾರಕ್ಕೆ ಕಾರಣವಾಗುವಂತಹ ಶಿಕ್ಷಣದ ಅಗತ್ಯವಿದೆ. ಯುವ ಸಮುದಾಯಕ್ಕೆ ಅಗತ್ಯವಿರುವ ವಿಚಾರಗಳನ್ನು ಕಲಿಕೆಯಲ್ಲಿ ಜೋಡಿಸಿಕೊಳ್ಳಬೇಕಾಗಿದೆ. ಸಬಲೀಕರಣಕ್ಕೆ ಶಕ್ತಿಕೊಡುವ, ಜ್ವಾಲೆಯ ರೀತಿಯಲ್ಲಿ ಶಿಕ್ಷಣ ಪದ್ಧತಿಬೇಕಾಗಿದೆ ಎಂದು ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಆರ್ಚ್ ಭಿಷಪ್ ಡಾ. ಪೀಟರ್ ಮಚಾದೋ ಹೇಳಿದರು.
ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೊಳಪಟ್ಟ ಪುತ್ತೂರು ಸಂತ ಫಿಲೋಮಿನಾ ಕಾಲೇಜು ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸ್ವಾಯತ್ತ ಸ್ಥಾನಮಾನದ ಉದ್ಘಾಟನೆ ನಡೆಸಿ ಮಾತನಾಡಿದರು.
ಸ್ವಾಯತ್ತ ಕಾಲೇಜಿನ ನೂತನ ಸೌಲಭ್ಯಗಳನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ ಮಾತನಾಡಿ ಉದ್ಯೋಗಕ್ಷೇತ್ರದ ಬೇಡಿಕೆಗಳಿಗೆ ಅನುಗುಣವಾದ ಪಠ್ಯಕ್ರಮವನ್ನು ರಚಿಸುವುದು ಮಾತ್ರ ಸ್ವಾಯತ್ತ ಸಂಸ್ಥೆಯ ಜವಾಬ್ದಾರಿಯಲ್ಲ. ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ಪಠ್ಯಕ್ರಮವನ್ನು ಜವಾಬ್ದಾರಿ ಸ್ವಾಯತ್ತ ಸಂಸ್ಥೆಗಿದೆ. ಶಿಕ್ಷಣದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕೊರತೆ ನೀಗಿಸುವ ಜತೆಗೆ ತಲೆಗೆ ಕೆಲಸ ನೀಡುವ ಸಾಹಿತ್ಯಗಳ ಅಗತ್ಯವಿದೆ ಎಂದರು.
ಸ್ವಾಯತ್ತ ಕಾಲೇಜಿನ ಲಾಂಛನವನ್ನು ಹಾಗೂ ಪರಿಷ್ಕರಿಸಲಾದ ಕಾಲೇಜು ವೆಬ್ ಸೈಟ್ ಬಿಡುಗಡೆಯನ್ನು ಮಾಜಿ ಸಂಸದ ನಡೆಸಿದರು. ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನದ ಸವಿ ನೆನಪಿಗಾಗಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ “ಫಿಲೋ ಜೆನೆಸಿಸ್” ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಬಿಡುಗಡೆಗೊಳಿಸಿದರು. ದಕ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು.
ಸ್ವಾಯತ್ತ ಕಾಲೇಜಿಗೆ ರಿಜಿಸ್ಟ್ರಾರ್ (ಅಕಾಡೆಮಿಕ್) ಆಗಿ ನೇಮಕಗೊಂಡ ಡಾ. ನಾರ್ಬರ್ಟ್ ಮಸ್ಕರೇನಸ್, ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಹಣಕಾಸು ಅಧಿಕಾರಿ ಡಾ. ಎಡ್ವಿನ್ ಎಸ್ ಡಿಸೋಜ, ಶೈಕ್ಷಣಿಕ ಉಪ ಕುಲಸಚಿವ ವಿಪಿನ್ ನಾಯಕ್ ಎನ್. ಎಸ್. ಪರೀಕ್ಷಾಂಗ ಉಪಕುಲಸಚಿವರಾದ ಜೋನ್ಸನ್ ಡೇವಿಡ್ ಸಿಕ್ವೇರಾ, ಅಭಿಷೇಕ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ ವಹಿಸಿದ್ದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಕವಿತಾ ಕೆ. ಆರ್., ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಕ್ಯಾಥೊಲಿಕ್ ಶಿಕ್ಷಣಮಂಡಳಿಯ ಕಾರ್ಯದರ್ಶಿ ಡಾ. ಪ್ರವೀಣ್ ಲಿಯೋ ಲಸ್ರಾದೊ, ನಿಕಟಪೂರ್ವ ಕಾರ್ಯದರ್ಶಿ ಆಂಟನಿ ಮೈಕೆಲ್ ಶೆರಾ, ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಮ್ಯಾಕ್ಸಿಮ್ ನೊರೊನ್ಹಾ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎ. ಎಂ. ಅಬ್ದುಲ್ ಕುಞ್ಞಿ ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಸ್ವಾಗತಿಸಿ ಪ್ರಾಸ್ತಾವನೆಗೈದರು. ಕಾಲೇಜು ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೇರೊ ವಂದಿಸಿದರು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್. ರೈ ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.

