ಕರಾವಳಿ

ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ಪ್ರಮುಖ ದೇವಸ್ಥಾನಗಳಲ್ಲಿ ದರ್ಶನ ಸಮಯ ಬದಲಾವಣೆ, ಸೇವೆಗಳು ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಮಾರ್ಚ್ 3ರಂದು ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ ಹಾಗೂ ದರ್ಶನ ಸಮಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ‘ಸೂತಕ’ ಕಾರಣದಿಂದಾಗಿ ಭಕ್ತರು ತಮ್ಮ ಭೇಟಿಯನ್ನು ಯೋಜಿಸುವಂತೆ ದೇವಾಲಯ ಆಡಳಿತ ಮಂಡಳಿಗಳು ಮನವಿ ಮಾಡಿವೆ.
ಈ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣವು ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:47ಕ್ಕೆ ಅಂತ್ಯಗೊಳ್ಳಲಿದೆ. ಭಾರತದಲ್ಲಿ ಚಂದ್ರೋದಯದ ನಂತರ ಸಂಜೆ 6:22ರಿಂದ 6:47ರವರೆಗೆ ಸುಮಾರು 25 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ. ಇದು ವರ್ಷದ ಅತ್ಯಂತ ದೀರ್ಘವಾದ ಗ್ರಹಣವೆಂದು ಹೇಳಲಾಗಿದೆ.

1. ಶ್ರೀ ಕ್ಷೇತ್ರ ಧರ್ಮಸ್ಥಳ
ಧರ್ಮಸ್ಥಳದಲ್ಲಿ ಬೆಳಿಗ್ಗೆ 6:30ರಿಂದ ಮಧ್ಯಾಹ್ನ 1:30ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 1:30ಕ್ಕೆ ದೇಗುಲ ಮುಚ್ಚಲಾಗುತ್ತದೆ. ಗ್ರಹಣ ಅವಧಿ ಮುಗಿದ ನಂತರ ರಾತ್ರಿ 7:30ಕ್ಕೆ ಪುನಃ ದರ್ಶನ ಆರಂಭವಾಗಲಿದೆ.

 

2. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ನಾಗಾರಾಧನೆಯ ಪ್ರಮುಖ ಕೇಂದ್ರವಾದ ಕುಕ್ಕೆಯಲ್ಲಿ ಮಾರ್ಚ್ 2 ಮತ್ತು 3ರಂದು ‘ಸರ್ಪ ಸಂಸ್ಕಾರ’ ಸೇರಿದಂತೆ ಪ್ರಮುಖ ಸೇವೆಗಳು ರದ್ದುಪಡಿಸಲಾಗಿದೆ. ಮಾರ್ಚ್ 3ರಂದು ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರುತ್ತದೆ. ನಂತರ ದೇಗುಲ ಮುಚ್ಚಲಾಗುತ್ತದೆ. ಮಧ್ಯಾಹ್ನದ ಅನ್ನದಾಸೋಹ ವ್ಯವಸ್ಥೆ ಇರುವುದಿಲ್ಲ. ಸಂಜೆ 7ರ ಬಳಿಕ ಮಹಾಪೂಜೆ ನಡೆದ ನಂತರ ದರ್ಶನ ಲಭ್ಯವಾಗಲಿದೆ.

3. ತಿರುಮಲ ತಿರುಪತಿ ದೇವಸ್ಥಾನ
ದಕ್ಷಿಣ ಭಾರತದ ಪ್ರಮುಖ ಶ್ರೀಕ್ಷೇತ್ರವಾದ ತಿರುಮಲದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7:30ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ಗ್ರಹಣ ಮುಕ್ತಾಯಗೊಂಡು ಸಂಪ್ರೋಕ್ಷಣೆ ವಿಧಿಗಳು ಪೂರ್ಣಗೊಂಡ ನಂತರ ರಾತ್ರಿ 8 ಗಂಟೆಯ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಗ್ರಹಣದ ಅವಧಿಯಲ್ಲಿ ದೇವಸ್ಥಾನಗಳು ಮುಚ್ಚಿರುವುದರಿಂದ ಭಕ್ತರು ಮೇಲ್ಕಂಡ ಸಮಯವನ್ನು ಗಮನಿಸಿ ತಮ್ಮ ಯಾತ್ರೆಯನ್ನು ಯೋಜಿಸಬೇಕೆಂದು ದೇವಸ್ಥಾನ ಆಡಳಿತ ಮಂಡಳಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ದೇವಸ್ಥಾನಗಳ ಅಧಿಕೃತ ಸೂಚನೆಗಳನ್ನು ಗಮನಿಸಲು ವಿನಂತಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts