ಮಂಗಳೂರು: ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸತತ ಎರಡನೇ ವರ್ಷವೂ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣಕ್ಕಾಗಿ ಜಾಗತಿಕ ಎ ಎಸ್ ಕ್ಯೂ (Airport Service Quality) ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವಿಮಾನ ನಿಲ್ದಾಣ ಮಂಡಳಿ ಅಂತರರಾಷ್ಟ್ರೀಯವಾದ ಏರ್ಪೋಟ್ಸ್ ಕೌನ್ಸಿಲ್ ಇಂಟರ್ ನ್ಯಾಷನಲ್ (ACI) ವಿಶ್ವವು 2025ನೇ ಸಾಲಿನ ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ASQ) ಪ್ರಶಸ್ತಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರದಾನ ಮಾಡಿದೆ. ಇದಕ್ಕೂ ಮೊದಲು 2024ರಲ್ಲಿಯೂ ಇದೇ ಪ್ರಶಸ್ತಿಯನ್ನು ವಿಮಾನ ನಿಲ್ದಾಣ ತನ್ನದಾಗಿಸಿಕೊಂಡಿತ್ತು.
ವಾಯುಯಾನ ಕ್ಷೇತ್ರದಲ್ಲಿ ಗ್ರಾಹಕರ ತೃಪ್ತಿಯನ್ನು ಅಳೆಯುವ ಅತ್ಯಂತ ವಿಶ್ವಾಸಾರ್ಹ ಮಾನದಂಡವಾಗಿ ಗುರುತಿಸಲ್ಪಟ್ಟಿರುವ ಎ ಎಸ್ ಕ್ಯೂ ಪ್ರಶಸ್ತಿಗಳು, ಎ ಸಿ ಐ ನಡೆಸುವ ಸ್ವತಂತ್ರ ಸಮೀಕ್ಷಾ ಕಾರ್ಯಕ್ರಮದ ಮೂಲಕ ಸಂಗ್ರಹಿಸಲಾದ ನೈಜ-ಸಮಯದ ಪ್ರಯಾಣಿಕರ ಪ್ರತಿಕ್ರಿಯೆಗಳ ಆಧಾರದಲ್ಲಿ ನೀಡಲಾಗುತ್ತವೆ.
ಆಗಮನ ವಿಭಾಗದ ಮೌಲ್ಯಮಾಪನದಲ್ಲಿ ವಲಸೆ ಪ್ರಕ್ರಿಯೆಗಳು, ಸಾಮಾನು ನಿರ್ವಹಣಾ ದಕ್ಷತೆ, ಟರ್ಮಿನಲ್ ಪರಿಸರ, ಸ್ವಚ್ಛತಾ ಮಾನದಂಡಗಳು, ಮಾರ್ಗದರ್ಶನ ವ್ಯವಸ್ಥೆ ಹಾಗೂ ಒಟ್ಟಾರೆ ಪ್ರಯಾಣಿಕರ ಸೌಕರ್ಯಗಳನ್ನು ಪರಿಗಣಿಸಲಾಗುತ್ತದೆ.2025ರಲ್ಲಿ ವಿಶ್ವದಾದ್ಯಂತ ಕೇವಲ ಆರು ವಿಮಾನ ನಿಲ್ದಾಣಗಳನ್ನು ಮಾತ್ರ ‘ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ – ಜಾಗತಿಕ’ ವಿಭಾಗದಲ್ಲಿ ಆಯ್ಕೆ ಮಾಡಲಾಗಿದ್ದು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಧನೆಯ ಮಹತ್ವವನ್ನು ಇದು ಎತ್ತಿ ತೋರಿಸಿದೆ.
ಈ ವಿಮಾನ ನಿಲ್ದಾಣವನ್ನು ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರಾದ ಅದಾನಿ ಏರ್ಪೋಟ್ ಹೋಲ್ಡಿಂಗ್ಸ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ತಂತ್ರಜ್ಞಾನ ಆಧಾರಿತ ಪ್ರಕ್ರಿಯೆಗಳು, ಸೇವಾ ತರಬೇತಿ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆ ಮಾಡುವ ಮೂಲಕ ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸಲು ಕ್ರಮಗಳನ್ನು ಕೈಗೊಂಡಿದೆ.
ಈ ಪ್ರಶಸ್ತಿಯನ್ನು 2026ರ ಸೆಪ್ಟೆಂಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆಯಲಿರುವ ಎಸಿ ಐ ವರ್ಲ್ಡ್ ವಿಮಾನ ನಿಲ್ದಾಣ ಅನುಭವ ಶೃಂಗಸಭೆಯಲ್ಲಿ ಔಪಚಾರಿಕವಾಗಿ ಪ್ರದಾನ ಮಾಡಲಾಗುತ್ತದೆ.ಈ ಮಾನ್ಯತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಆದ್ಯತೆಯ ಪ್ರವೇಶ ದ್ವಾರವಾಗಿರುವ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.





















