ಮಂಗಳೂರು: ಕೇಂದ್ರ ಸರಕಾರದ ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ರಾಜ್ಯಕ್ಕೆ 750 ಇಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿರುವ ಬೆನ್ನಲ್ಲೇ, ಮಂಗಳೂರಿನಲ್ಲಿ ಸರಕಾರಿ ಹಾಗೂ ಖಾಸಗಿ ವಲಯದಿಂದ ಇವಿ ಬಸ್ ಸಂಚಾರಕ್ಕೆ ಸಿದ್ಧತೆಗಳು ಆರಂಭಗೊಂಡಿವೆ.
ವಾಹನಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ನಿಯಂತ್ರಣದ ಉದ್ದೇಶದಿಂದ ಕೇಂದ್ರ ಸರಕಾರ ದೇಶಾದ್ಯಂತ ಇಲೆಕ್ಟ್ರಿಕ್ ಬಸ್ ಬಳಕೆಗೆ ಆದ್ಯತೆ ನೀಡುತ್ತಿದೆ. ಅದರಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಾಜ್ಯಕ್ಕೆ 750 ಇಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರುಗೊಳಿಸಿದ್ದು, ಆ ಪೈಕಿ ಸುಮಾರು 100 ಬಸ್‌ಗಳು ಮಂಗಳೂರು ನಗರಕ್ಕೆ ಬರುವ ಸಾಧ್ಯತೆ ಇದೆ.ಈ ಇವಿ ಬಸ್‌ಗಳ ಚಾರ್ಜಿಂಗ್ ವ್ಯವಸ್ಥೆಗೆ ಕುಂಟಿಕಾನ ಕೆಎಸ್ಸಾರ್ಟಿಸಿ ಡಿಪೋ ಹಾಗೂ ಬಿಜೈ ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆಗೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಅನುಮೋದನೆ ನೀಡಿವೆ.
ಖಾಸಗಿ ವಲಯವೂ ಸಜ್ಜು
ಸರಕಾರಿ ಇವಿ ಬಸ್‌ಗಳ ಜೊತೆಗೆ ಖಾಸಗಿ ಬಸ್ ಮಾಲಕರೂ ಇವಿ ಬಸ್ ಖರೀದಿಗೆ ಮುಂದಾಗಿದ್ದಾರೆ. ಪ್ರಾಯೋಗಿಕವಾಗಿ ಇಲೆಕ್ಟ್ರಿಕ್ ಬಸ್‌ಗಳ ಓಡಾಟ ನಡೆಸಿ ಯಶಸ್ಸು ಕಂಡರೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಲು ನಿರ್ಧರಿಸಲಾಗಿದೆ.
ಖಾಸಗಿ ಇವಿ ಬಸ್‌ಗಳ ವೈಶಿಷ್ಟ್ಯಗಳು:
- ಉದ್ದ: 9 ಮೀಟರ್
- ಆಸನ ಸಾಮರ್ಥ್ಯ: 32–41 ಸೀಟುಗಳು
- ಬ್ಯಾಟರಿ ಸಾಮರ್ಥ್ಯ: 200 ಕಿಮೀ ಓಡಾಟ
- ರಿಚಾರ್ಜ್ ಸಮಯ: 2 ಗಂಟೆ
- ಹವಾನಿಯಂತ್ರಿತ (AC) ಸೌಲಭ್ಯ
- 5 ವರ್ಷಗಳ ಬ್ಯಾಟರಿ ಗ್ಯಾರಂಟಿ
- ಬಸ್ ಬಾಡಿ ವಿನ್ಯಾಸ: ಪುಣೆಯಲ್ಲಿ ತಯಾರಿ
ಖಾಸಗಿ ವಲಯದ ಆತಂಕ
“ಮಂಗಳೂರಿನಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಈಗ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರ 100 ಇವಿ ಬಸ್‌ಗಳನ್ನು ಓಡಿಸಲು ಮುಂದಾಗಿರುವುದರಿಂದ ಖಾಸಗಿ ವಲಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿ ಖಾಸಗಿ ವಲಯವೂ ಇವಿ ಬಸ್ ಖರೀದಿಗೆ ಮುಂದಾಗಿದೆ,” ಎಂದು ದಿಲ್‌ರಾಜ್ ಆಳ್ವ, ಮಾಜಿ ಅಧ್ಯಕ್ಷರು, ದ.ಕ. ಜಿಲ್ಲಾ ಸಿಟಿ ಬಸ್ ಮಾಲಕರ ಸಂಘ ತಿಳಿಸಿದ್ದಾರೆ.ದೇಶದಲ್ಲೇ ಮೊತ್ತಮೊದಲ ಸಾರಿಗೆ ಬಸ್ ವ್ಯವಸ್ಥೆಯು ಮಂಗಳೂರಿನಲ್ಲಿ ಆರಂಭವಾಗಿತ್ತು. ಅಂದರೆ 1914ರಲ್ಲಿ ಶಂಕರ್ ವಿಠಲ್ ಸಂಸ್ಥೆ ಮಂಗಳೂರು-ಬಂಟ್ವಾಳ ಮಧ್ಯೆ ಮೊದಲ ಖಾಸಗಿ ಬಸ್ ಸಂಚಾರ ಆರಂಭಿಸಿತ್ತು. ಇದೀಗ ಇವಿ ಬಸ್ ವ್ಯವಸ್ಥೆಗೂ ಮಂಗಳೂರು ಮಾದರಿಯಾಗಿದೆ.ಇವಿ ಬಸ್ ಸಂಚಾರ ಆರಂಭವಾದರೆ ಮಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಕಂಡುಬರುವ ನಿರೀಕ್ಷೆಯಿದೆ.





















