ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಮೃಗಾಲಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 150ಕ್ಕೂ ಹೆಚ್ಚು ವನ್ಯಜೀವಿಗಳು ಅಸಹಜವಾಗಿ ಸಾವನ್ನಪ್ಪಿರುವ ಘಟನೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸಾವನ್ನಪ್ಪಿದ ಜಿಂಕೆಯ ಮರಣೋತ್ತರ ಪರೀಕ್ಷೆಯಲ್ಲಿ ಹೈಡ್ರೋಸೈನೇಡ್ ಹಾಗೂ ನೈಟ್ರೇಟ್ ಅಂಶಗಳು ಪತ್ತೆಯಾಗಿರುವುದು ಹೊಸ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಪ್ರಯೋಗಾಲಯದಿಂದ ಬಂದ ವರದಿ ಪ್ರಕಾರ, ಮೃಗಾಲಯದಲ್ಲಿ ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಎಲೆಕೋಸು ಮತ್ತು ಹೂಕೋಸು ಬೆಳೆಗಳಲ್ಲಿ ಅತಿಯಾದ ಕೀಟನಾಶಕ ಅವಶೇಷಗಳು ಇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ತರಕಾರಿ ಎಲೆಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದೆ ಹಸಿಯಾಗಿಯೇ ಪ್ರಾಣಿಗಳಿಗೆ ನೀಡಲಾಗುತ್ತಿತ್ತೇ ಎಂಬ ಪ್ರಶ್ನೆ ಉದ್ಭವಿಸಿದೆ. ವಿಷಕಾರಿ ಅಂಶಗಳು ನಿಧಾನವಾಗಿ ದೇಹದಲ್ಲಿ ಸಂಗ್ರಹವಾಗಿ ‘ಸ್ಲೋ ಪಾಯಿಸನಿಂಗ್’ ಮೂಲಕ ಸಾವಿಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಇತ್ತೀಚಿನ ಅವಧಿಯಲ್ಲಿ ಹುಲಿ, ಜಿಂಕೆ, ಸಾಂಬಾರ್, ಕಾಡುಹಂದಿ ಸೇರಿದಂತೆ ಹಲವು ಪ್ರಾಣಿಗಳ ಸಾವುಗಳು ದಾಖಲಾಗಿವೆ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪ್ರಕರಣದ ಬಗ್ಗೆ ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ವಿಷಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಕ್ಯಾಬೇಜ್ ಮತ್ತು ಕಾಲಿಫ್ಲವರ್ ಎಲೆಗಳನ್ನು ಆಹಾರವಾಗಿ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಮೃಗಾಲಯದ ದಯನೀಯ ಸ್ಥಿತಿ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.ಅಸ್ವಚ್ಛ ಪರಿಸರ ಹಾಗೂ ಸಮರ್ಪಕ ಆರೈಕೆಯ ಕೊರತೆಯ ಬಗ್ಗೆ ಕೋರ್ಟ್ ತೀವ್ರವಾಗಿ ಕಿಡಿಕಾರಿದ್ದು, ಅಗತ್ಯವಿದ್ದರೆ ಮೃಗಾಲಯವನ್ನು ಮುಚ್ಚುವಂತೆ ಎಚ್ಚರಿಕೆ ನೀಡಿತ್ತು. ಅಲ್ಲದೇ ಡಿಸೆಂಬರ್ 2025ರಲ್ಲಿ ಪರವಾನಗಿ ಅವಧಿ ಮುಗಿದಿದ್ದರೂ ನವೀಕರಣವಾಗಿದೆಯೇ ಎಂಬ ವಿಚಾರವೂ ಪ್ರಶ್ನಾರ್ಥಕವಾಗಿತ್ತು.ಈ ಎಲ್ಲ ಬೆಳವಣಿಗೆಗಳ ಮಧ್ಯೆ ಜಿಂಕೆಯ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಪ್ರಾಣಿಗಳ ಸುರಕ್ಷತೆ ಮತ್ತು ಆರೈಕೆಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.




















