ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಸಮಗ್ರ ಶಿಕ್ಷಣ ಕರ್ನಾಟಕದಡಿ ಜಾರಿಯಲ್ಲಿರುವ ‘ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಣಾ ತರಬೇತಿ’ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ 171 ಸರ್ಕಾರಿ ಪ್ರೌಢಶಾಲೆಗಳ ಒಟ್ಟು 9,943 ವಿದ್ಯಾರ್ಥಿನಿಯರು ಮೂರು ತಿಂಗಳ ವಿಶೇಷ ಕರಾಟೆ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರತೀ ಶಾಲೆಗೆ ₹9,000 ಅನುದಾನ ನೀಡಿ ಒಟ್ಟು 18 ತರಬೇತಿ ಅವಧಿಗಳನ್ನು ನಡೆಸಲಾಗಿದೆ.
ಫೇಸ್ ಪಂಚ್, ಸ್ಟ್ರೈಟ್ ಪಂಚ್, ಕೌಂಟರ್ ಪಂಚ್ ಸೇರಿದಂತೆ ದಾಳಿ ತಪ್ಪಿಸುವ ತಂತ್ರಗಳನ್ನು ಕಲಿಸಲಾಗಿದ್ದು, ತರಬೇತಿಯಿಂದ ವಿದ್ಯಾರ್ಥಿನಿಯರಲ್ಲಿ ಧೈರ್ಯ, ಚುರುಕುತನ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.






















