ಕರಾವಳಿ

ದೇಹದಂತೆ ದೇಶ, ದೇವರ ರಕ್ಷಣೆ ಅಗತ್ಯ | ಪುತ್ತೂರಿನಲ್ಲಿ ಶೋಭಾಯಾತ್ರೆ ಬಳಿಕ ನಡೆದ ಹಿಂದೂ ಸಂಗಮದಲ್ಲಿ ಕಣಿಯೂರು ಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದೇಹವನ್ನು ದಿನನಿತ್ಯ ರಕ್ಷಣೆ ಮಾಡುವಂತೆ ದೇಶ ಹಾಗೂ ದೇವಸ್ಥಾನವನ್ನು ರಕ್ಷಣೆ ಮಾಡಬೇಕು ಎಂದು ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಹೇಳಿದರು.

ನಗರದ ವಿದ್ಯಾರಣ್ಯ ವಸತಿಯ ಹಿಂದು ಸಂಗಮ ನಿರ್ವಹಣಾ ಸಮಿತಿ ನೇತೃತ್ವದಲ್ಲಿ ಭಾನುವಾರ ಸುಕೃತೀಂದ್ರ ಸಭಾಭವನದ ಆವರಣದಲ್ಲಿ ಜರಗಿದ ಹಿಂದು ಸಂಗಮದಲ್ಲಿ ಅವರು‌ ಆಶೀರ್ವಚನ ನೀಡಿದರು.

ನಾವು ದೇವರನ್ನು ನಂಬುತ್ತೇವೆ. ಮಾತ್ರವಲ್ಲ ರಕ್ಷಣೆಯನ್ನು ಮಾಡುತ್ತೇವೆ. ದೇವರನ್ನು, ದೇವಸ್ಥಾನವನ್ನು ಯಾಕೆ ರಕ್ಷಣೆ ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ನಮ್ಮ ದೇಹವನ್ನು ದಿನನಿತ್ಯ ಶುಚಿಯಾಗಿಟ್ಟು ರಕ್ಷಣೆ ಮಾಡುವುದಿಲ್ಲವೇ? ಅದೇ ರೀತಿ ದೇವಸ್ಥಾನ ಹಾಗೂ ದೇಶವನ್ನು ರಕ್ಷಿಸಬೇಕು. ಆಗ ನಮ್ಮೊಳಗೆ ಇರುವ ಹಿಂದುತ್ವ ಪ್ರಭೆಯಾಗಿ ನಿಲ್ಲುತ್ತದೆ. ನಾವೆಲ್ಲರೂ ಹಿಂದುಗಳು ಎಂಬ ಅರಿವು ಮೂಡುತ್ತದೆ. ಆಗ ನಾವೆಲ್ಲರೂ ಸೈನಿಕರಾದಂತೆ ಎಂದರು.

ಮನುಷ್ಯ ಅಥವಾ ಸಂಸ್ಥೆ ಅಮರನಾಗಬೇಕು. ಎಷ್ಟು ವರ್ಷ ಬದುಕಬೇಕು ಎನ್ನುವುದಕ್ಕಿಂತ ಹೇಗೆ ಬದುಕಬೇಕು ಎನ್ನುವುದು ಮುಖ್ಯ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಬದುಕಿದೆ. ಇಷ್ಟು ವರ್ಷ ಹೇಗೆ ಬದುಕಿದೆ ಎನ್ನುವುದನ್ನು ಅವಲೋಕನ ಮಾಡುವ ಸಂದರ್ಭವಿದು. ಇದರಿಂದ ನಾವು ತಿಳಿದುಕೊಳ್ಳಬೇಕಾದದ್ದು ಏನೆಂದರೆ ಸಂಘಕ್ಕೆ ಧರ್ಮದ ಬೆಂಬಲ ಇದೆ. ಹಿಂದೂ ಎಂದರೇನು? ಅದು ಮಹಾಸಾಗರ. ಎಲ್ಲರೂ ಅದಕ್ಕೆ ಸೇರಿಕೊಳ್ಳಬೇಕಷ್ಟೇ. ನಮ್ಮ ಹಿರಿಯರು ಹೇಳಿಕೊಟ್ಟ ಐದು ತತ್ವಗಳನ್ನು ನಾವು ಪಾಲಿಸಬೇಕು ಎಂದು ಕರೆ ನೀಡಿದರು.

ಬೌದ್ಧಿಕ್ ನೀಡಿದ ಪ್ರಕಾಶ್ ಪುರೋಹಿತ್, ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪುತ್ತೂರು ಜಿಲ್ಲೆಯ 64 ಕಡೆಗಳಲ್ಲಿ ಹಿಂದೂ ಸಂಗಮ ನಡೆಯುತ್ತಿದೆ. ಸಂಘ ಯಾಕಾಗಿ ಪ್ರಾರಂಭವಾಯಿತು ಎಂದು ಮತ್ತೊಮ್ಮೆ ಅರ್ಥ ಮಾಡಿಕೊಳ್ಳಬೇಕಾದ ಸಂದರ್ಭ. ಯಾವುದೇ ವಿಚಾರವನ್ನು ದ್ವೇಷಿಸಲು ಸಂಘ ಹುಟ್ಟಿಕೊಂಡದ್ದಲ್ಲ. ನಮ್ಮ ಸಂಸ್ಕೃತಿ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಡಾಕ್ಟರ್ ಜೀ ಅವರು ಸಂಘವನ್ನು ಹುಟ್ಟು ಹಾಕಿದರು. ನಮ್ಮ ಮನೆಯಲ್ಲಿ ಭಜನೆ ಆಗ್ತಾ ಇದ್ಯಾ. ಅತಿಥಿಗಳನ್ನು ಆದರಿಸಿ ಸತ್ಕರಿಸುತ್ತಿದ್ದೇವೆಯೇ? ನಾವೇ ಹಾಕಿಕೊಂಡ ಜಾತಿ‌ ಪದ್ಧತಿಯಿಂದ ನಾವೆಷ್ಟು ನೊಂದುಕೊಂಡಿದ್ದೇವೆ ಎಂದು ಅರ್ಥ ಮಾಡಿಕೊಳ್ಳಬೇಕು. ಆಗ ನಮಗಿಂತ ಕೆಳ ಜಾತಿ ಇನ್ನೊಂದು ಇದೆ, ಅವರನ್ನು ದೂರ ಇಡಬೇಕು ಎನ್ನುವ ಮನಸ್ಥಿತಿಯಿಂದ ನಾವು ಹೊರಬರಲು ಸಾಧ್ಯ. ಪಂಚಭೂತಗಳಲ್ಲಿ ದೇವರನ್ನು ಕಂಡವರು ನಾವು. ಈ ಭೂಮಿ ಮಲಿನಗೊಂಡಿದ್ದು, ಇದನ್ನು ಸರಿಪಡಿಸಲು ನಾವೇನು ಮಾಡಬಹುದು ಎಂದು ಆಲೋಚಿಸಬೇಕಲ್ಲವೇ? ದೇಶ ಸೇವೆಗಾಗಿ ಗಡಿಗೇ ಹೋಗಬೇಕೆಂದಿಲ್ಲ, ಪರಿಸರದಲ್ಲಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸಿದ ಸಾರ್ಥಕತೆಯೂ ಸಾಕು. ಮಾತೃಭಾಷೆಯ ಬಳಕೆ, ಸ್ವದೇಶಿ ಚಿಂತನೆಯಲ್ಲಿ ನಾವೆಷ್ಟು ತೊಡಗಿಸಿಕೊಂಡಿದ್ದೇವೆ? ದೇವಸ್ಥಾನಗಳಿಗೆ ಹೋಗುವುದನ್ನು ಮಕ್ಕಳಿಗೆ ತಿಳಿಸಿಕೊಡುತ್ತಿದ್ದೇವಾ ಎಂದು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು ಎಂದರು.

ಉದ್ಯಮಿ ಲಕ್ಷ್ಮೀಕಾಂತ್ ಆಚಾರ್ಯ ಶುಭಹಾರೈಸಿದರು.

ಮಾನಕ ಜ್ಯುವೆಲ್ಸ್’ನ ಸಿದ್ಧನಾಥ್ ಅಧ್ಯಕ್ಷತೆ ವಹಿಸಿದ್ದರು.

ಸಮಿತಿ ಉಪಾಧ್ಯಕ್ಷ ವಿಘ್ನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.

ಇದೇ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಪಿ.ಕೆ. ಗಣೇಶನ್, ರಾಜರತ್ನಂ ದೇವಾಡಿಗ, ಲಿಂಗಪ್ಪ ಗೌಡ, ಅರುಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಪುತ್ತೂರು‌ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದುಶೇಖರ್ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಖ್ಯಪೇಟೆಯಲ್ಲಿ ಸಾಗಿಬಂದ ಶೋಭಾಯಾತ್ರೆ:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಶೋಭಾಯಾತ್ರೆಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಡಾ. ಪ್ರಸಾದ್ ಭಂಡಾರಿ ಮೊದಲಾದವರು ತೆಂಗಿನಕಾಯಿ ಒಡೆದು, ಶೋಭಾಯಾತ್ರೆ ಹೊರಟಿತು. ಮುಂಭಾಗದಲ್ಲಿ ಕುಣಿತ ಭಜನೆ ನಂತರ ಸಿಂಗಾರಿ ಚೆಂಡೆ ಮೇಳ, ಸೈನಿಕರ ಹಾಗೂ ವೀರ ವನಿತೆಯರ ವೇಷ ಧರಿಸಿದ ಪುಟಾಣಿ ಮಕ್ಕಳು ಸಾಗಿದರು. ಇವರ ಹಿಂಭಾಗದಿಂದ ಪ್ರಮುಖರು, ಕಾರ್ಯಕರ್ತರು ಹೆಜ್ಜೆ ಹಾಕಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts