ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ನಾಡು ವಲಯದ ಕುಂಜೂರುಪಂಜ ಕಾರ್ಯಕ್ಷೇತ್ರದ ಕುಂಜೂರುಪಂಜ ಒಕ್ಕೂಟದ ತ್ರೈಮಾಸಿಕ ಸಭೆ ದೇವಸ್ಯ ಮಂಜುನಾಥ ಸಭಾಭವನದಲ್ಲಿ ಭಾನುವಾರ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಸಾರ್ವಜನಿಕ ಸಂಪರ್ಕ ಅಧಿಕಾರಿ ದುಗ್ಗೆ ಗೌಡ ಮಾತನಾಡಿ, ಧರ್ಮಸ್ಥಳದಲ್ಲಿ ನಡೆಯುವಂತಹ ದಾನ ಧರ್ಮಗಳು ಹೇಗೆ ಪ್ರಸಿದ್ಧಿಯನ್ನು ಪಡೆದವು. ಡಾ. ವೀರೇಂದ್ರ ಹೆಗ್ಗಡೆ ಅವರ ವಿಶ್ವಕ್ಕೆ ಪಸರಿಸುವಂತಹ ಕೆಲಸ ಕಾರ್ಯ, ಔಷಧಿ ದಾನಗಳ ಬಗ್ಗೆ ಮಾಹಿತಿ ನೀಡಿದರು.
ಯೋಜನೆಯ ಕಾರ್ಯಕ್ರಮ ಮತ್ತು ಕ್ಷೇತ್ರದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಅವರು, ಕುಟುಂಬಗಳು ಅಭಿವೃದ್ಧಿಗೆ ರೂಪಿಸಬೇಕಾದ ಯೋಜನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. 26 ಕಾರ್ಯಕರ್ತರಿರುವಂತಹ ಸಂಸ್ಥೆ ಇಂದು 45,000 ಕಾರ್ಯಕರ್ತರನ್ನು ಒಳಗೊಂಡಿದೆ.
ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಮಾಡದ ಕಾರ್ಯಕ್ರಮಗಳಿಲ್ಲ ಎಂದು ಹೇಳಿದರು.
ಮೇಲ್ವಿಚಾರಕ ಪ್ರಶಾಂತ್ ಕುಮಾರ್ ಅವರು ಸಂಪೂರ್ಣ ಸುರಕ್ಷಾ ಮತ್ತು ಯೋಜನೆಯ ಇನ್ನಿತರ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಉಪಾಧ್ಯಕ್ಷೆ ಉಮಾವತಿ ಅಧ್ಯಕ್ಷತೆ ವಹಿಸಿದ್ದರು. ಜನಶಿಕ್ಷಣ ಸಂಯೋಜಕಿ ಕಾವೇರಿ ಅವರು ಗ್ರಾಮ ಪಂಚಾಯಿತಿಯಿಂದ ಸಿಗುವ ಸೌಲಭ್ಯ, ಉದ್ಯೋಗ ಖಾತೆ ಕಾರ್ಡ್ ಮಾಡಿದರೆ ಅದರ ಅನುಕೂಲ ಮತ್ತು ಇತರ ಸೌಲಭ್ಯದ ಬಗ್ಗೆ ವಿವರಿಸಿದರು.
ರತ್ನಶ್ರೀ ಸಂಘದ ಸದಸ್ಯ ವಿಶ್ವನಾಥ ಹೃದಯಾಘಾತದಿಂದ ಮೃತಪಟ್ಟಿದ್ದು, ಪ್ರಗತಿ ರಕ್ಷಾ ಕವಚ ವಿಮೆಯ ಮೂಲಕ ಸಾಲ ಮನ್ನಾ ಮಾಡಲಾಗಿತ್ತು. ಇದರ ಮಂಜೂರಾತಿ ಪತ್ರವನ್ನು ದುಗ್ಗೆಗೌಡ ಅವರು ವಿಶ್ವನಾಥ ಅವರ ನಾಮಿನಿ ಸರಸ್ವತಿ ಅವರಿಗೆ ವಿತರಿಸಿದರು.
ಒಕ್ಕೂಟದ ಜನನಿ ಸಂಘದ ಸದಸ್ಯರಾದ ರೇವತಿ ಅನಾರೋಗ್ಯದಿಂದ ಬಳಲುತ್ತಿದ್ದು, ಒಕ್ಕೂಟದ ಸದಸ್ಯರು ಸಂಗ್ರಹಣೆ ಮಾಡಿದ ಹಣವನ್ನು ರೇವತಿ ಅವರ ಪತಿ ವಸಂತ ಅವರಿಗೆ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಶರ್ಮಿಳಾ, ಜೊತೆ ಕಾರ್ಯದರ್ಶಿ ರೇಣುಕಾ, ಕೋಶಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.
ಅಲ್ಫಿದ ಸಂಘದ ಜವಾಬ್ದಾರಿಯಲ್ಲಿ ಸಾಮೂಹಿಕ ದ್ಯೇಯಗೀತೆಯೊಂದಿಗೆ ಸಭೆ ಆರಂಭವಾಯಿತು. ವೀಣಾ ವಂದಿಸಿದರು. ಸೇವಾಪ್ರತಿನಿಧಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.





















