ಪುತ್ತೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ರಾಜಕಾರಣಿಗಳ ಕುಮ್ಮಕ್ಕಿನಿಂದ ರಾಜಕೀಯ ಪ್ರೇರಿತವಾಗಿ ಭಕ್ತಕೋಡಿಯಲ್ಲಿ ಭಗವಾಧ್ವಜದ ಕಟ್ಟೆಯ ತೆರವು ಕಾರ್ಯ ನಡೆದಿದ್ದು, ಈ ಬೆಳವಣಿಗೆ ಅಧಿಕಾರಿಗಳಿಗೆ ಶೋಭೆ ತರುವಂತದಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯಿಸಿದ್ದಾರೆ.
ಸ್ಥಳೀಯ ಪಂಚಾಯತ್ ಅಧ್ಯಕ್ಷರ ಮಾತಿಗೂ ಬೆಲೆ ನೀಡದ ಅಧಿಕಾರಿಗಳ ಮೇಲೆ ಗ್ರಾಮ ಪಂಚಾಯತ್ ಕಾನೂನು ಕ್ರಮ ಕೈಗೊಳ್ಳಬೇಕು. ಹಲವು ವರ್ಷಗಳಿಂದ ಇದ್ದ ಭಗವಧ್ವಜದ ಕಟ್ಟೆಯನ್ನು ತೆರವುಗೊಳಿಸಿದ್ದು ಹಿಂದೂಗಳ ಧಾರ್ಮಿಕ ನಂಬಿಕೆ ಮೇಲಿನ ದಾಳಿಯಾಗಿದೆ. ಇದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದೇಪದೇ ಈ ರೀತಿಯ ಘಟನೆ ನಡೆಯುತ್ತಿದ್ದು, ರಾಜಕೀಯ ಲಾಭಕ್ಕಾಗಿ ಹಿಂದೂ ಸಮಾಜವನ್ನು ಕೆಣಕುವ ಪ್ರಯತ್ನ ಮಾಡುತ್ತಿದೆ. ಈ ರೀತಿಯ ದ್ವೇಷದ ರಾಜಕಾರಣಕ್ಕೆ ಮುಂದಿನ ದಿವಸದಲ್ಲಿ ಹಿಂದೂ ಸಮಾಜ ಉತ್ತರ ನೀಡಲು ಸಿದ್ದವಾಗಿದೆ ಎಂದು ಹೇಳಿದ್ದಾರೆ.


























