ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ಇತಿಹಾಸ ಪ್ರಸಿದ್ಧ ಬದ್ರಿಯಾ ಮಸೀದಿಗೆ ಸಂಬಂಧಪಟ್ಟ ಜಮೀನಿನ ಪರವಾಗಿ ಪಾಣಾಜೆ ಗ್ರಾಮ ಪಂಚಾಯತ್ ಮತ್ತು ಬದ್ರಿಯಾ ಜುಮಾ ಮಸೀದಿಗೆ ಸಂಬಂಧಿಸಿ ಇದ್ದ ಜಾಗದ ತಕರಾರು ಕುರಿತು ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರ ಮೂಲಕ ಸ್ವಲ್ಪ ಭೂಮಿಯನ್ನು ಮಸೀದಿಯ ದಫನ ಭೂಮಿಗೆ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದರ ವಿರುದ್ಧ ಪಾಣಾಜೆ ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದಾಗಿ ಯಾವುದೇ ನೇತೃತ್ವದ ಹೆಸರು ದಾಖಲಿಸದೆ ಅನಾಮಿಕ ಪೋಸ್ಟರ್‌ಗಳು ವೈರಲ್ ಆಗುತ್ತಿದೆ. ಇದು ಖಂಡನೀಯ ಎಂದು ಆರ್ಲಪದವು ಬದ್ರಿಯಾ ಜುಮಾ ಮಸೀದಿ ಲೆಕ್ಕಪರಿಶೋಧಕ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 35 ವರ್ಷಗಳಿಂದ ಮಸೀದಿಯ ಸ್ವಾಧೀನ ಇದ್ದ ಜಮೀನನ್ನು ಇಸ್ಮಾಯಿಲ್ ಬ್ಯಾರಿ ಅವರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾಗಿತ್ತು. ಜಾಗ ಮಸೀದಿ ಸ್ವಾಧೀನದಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಮೂಲಕ ಅಕ್ರಮ-ಸಕ್ರಮವನ್ನು ವಜಾ ಮಾಡಿಸಿಯಾಗಿತ್ತು. ಈ ನಡುವೆ ಸದ್ರಿ ಜಮೀನು ಕೋರ್ಟ್ನಲ್ಲಿ ಇರುವುದನ್ನು ಬಗೆಹರಿಸಿ ಸರಕಾರಿ ಜಮೀನಾಗಿ ಪರಿವರ್ತನೆ ಆದಾಗ ಹಲವು ಸಂಸ್ಥೆಗಳು ಅರ್ಜಿಗಳನ್ನು ಸಲ್ಲಿಸಿದ್ದರು. ಸದ್ರಿ ಅರ್ಜಿಯಲ್ಲಿ ನಮ್ಮ ಮಸೀದಿಯ ಹೆಸರು ಕಂಡು ಬಂದಾಗ ಹಲವು ಸಂಘ ಸಂಸ್ಥೆಗಳು ಅರ್ಜಿಗಳನ್ನು ಹಿಂದಕ್ಕೆ ಪಡೆದಿದ್ದರು. ಈ ಸಂದರ್ಭ ಜಮೀನಿನ ಬಗ್ಗೆ ಹೈಕೋರ್ಟ್ನಲ್ಲಿ ವ್ಯಾಜ್ಯ ಇದ್ದು ಹೀಗಿರುವಲ್ಲಿ ಸದ್ರಿ ಜಮೀನಿನ ಬಗ್ಗೆ ಮಸೀದಿಯ ಆಡಳಿತ ಸಮಿತಿ, ಪಾಣಾಜೆ ಗ್ರಾ.ಪಂ., ಇಸ್ಮಾಯಿಲ್ ಬ್ಯಾರಿ ಒಟ್ಟು ಸೇರಿ ಪುತ್ತೂರು ತಹಸೀಲ್ದಾರ್ ಕಚೇರಿಯಲ್ಲಿ ಆಗಿನ ಶಾಸಕರ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿದ್ದೆವು. ನಂತರದ ಬೆಳವಣಿಗೆಯಲ್ಲಿ ಗ್ರಾ.ಪಂ. ನಮ್ಮ ಮಸೀದಿಯ ದಫನ ಭೂಮಿಗೆ ತಾಗಿಕೊಂಡಿರುವ 1.15 ಎಕ್ರೆ ಸ್ಥಳವನ್ನು ಗ್ರಾ.ಪಂ. ಹೆಸರಿಗೆ ಕಾಯ್ದಿರಿಸಲಾಗಿದೆ ಎಂದು ಮಾಡಿದಾಗ ಆ ಆದೇಶಕ್ಕೆ ಮಸೀದಿಯ ಆಡಳಿತ ಸಮಿತಿ ಕೆಎಟಿ ಯಲ್ಲಿ ವ್ಯಾಜ್ಯ ದಾಖಲು ಮಾಡಿತ್ತು ಎಂದರು.
ಇದೀಗ ಈ ವಿಷಯವನ್ನು ಸೌಹಾರ್ದಯುತವಾಗಿ ಮುಗಿಸುವ ನಿಟ್ಟಿನಲ್ಲಿ ಪಾಣಾಜೆ ಗ್ರಾ.ಪಂ. ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಮಾತುಕತೆ ನಡೆಸಿ 70 ಸೆಂಟ್ಸ್ ಜಾಗ ಗ್ರಾ.ಪಂ. ಗೆ 45 ಸೆಂಟ್ಸ್ ಜಾಗ ಬದ್ರಿಯಾ ಜುಮಾ ಮಸೀದಿಯ ದಫನ ಭೂಮಿಗೆ ವಿಂಗಡನೆ ಮಾಡಿ ನೀಡುವಂತೆ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಬಹುಮತದೊಂದಿಗೆ ನಿರ್ಣಯಿಸಲಾಗಿದೆ. ಎಲ್ಲಾ ದಾಖಲೆಗಳು ನಮ್ಮಲ್ಲಿ ಇದೆ. ಈ ಸಂದರ್ಭ ಸಾಮಾಜಿಕ ಮುಂದಾಳು ಕಾವು ಹೇಮನಾಥ ಶೆಟ್ಟಿ ಮುಖಾಂತರ ಶಾಸಕ ಅಶೋರ್ ಕುಮಾರ್ ರೈ ಅವರ ಗಮನಕ್ಕೆ ತರಲಾಗಿದ್ದು, ಸದ್ರಿ ವಿಷಯಕ್ಕೆ ಸಂಬಂಧಿಸಿ ಸರಿಪಡಿಸುವ ಅಶಾಭಾವನೆಯನ್ನು ಶಾಸಕರು ನೀಡಿದ್ದಾರೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ:
ಪಾಣಾಜೆ ಗ್ರಾ.ಪಂ. ಸರ್ವಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿದ್ದು ಎಲ್ಲಾ ರಂಗದಲ್ಲೂ ಅತ್ಯುತ್ತಮ ಹೆಸರನ್ನು ದಾಖಲಿಸಲಾಗಿದೆ. ನಮ್ಮ ಪೂರ್ವಜರ ಕಾಲದಿಂದಲೂ ಎಲ್ಲಾ ಧರ್ಮಗಳ ನಡುವೆಯೂ ಶಾಂತಿ ಸಹಬಾಳ್ವೆ ಐಕ್ಯತೆಯನ್ನು ಹೊಂದಿರುವ ನಮ್ಮ ಗ್ರಾಮದಲ್ಲಿ ಸದ್ರಿ ಜಮೀನಿನ ಬಗ್ಗೆ ದ್ವೇಷ ರಾಜಕಾರಣವೋ ಅಥವಾ ರಾಜಕೀಯ ಪ್ರೇರಿತವೋ ಎಂಬಂತೆ ಪಾಣಾಜೆ ಗ್ರಾಮಸ್ಥರಿಂದ ಪ್ರತಿಭಟನೆ ಎಂಬ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಖಂಡನೀಯ ಎಂದು ಎಸ್. ಅಬೂಬಕ್ಕರ್ ಆರ್ಲಪದವು ತಿಳಿಸಿದ್ದಾರೆ.
ಪ್ರತಿಭಟನೆ ಮಾಡಬೇಕಾದದ್ದು ನಾವು:
ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಎ.ಕೆ.ಮುಹಮ್ಮದ್ ಕುಂಞ ಮಾತನಾಡಿ, ಗ್ರಾ.ಪಂ.ನಿಂದ ಜಾಗವು 1 ಕಿ.ಮೀ. ದೂರದಲ್ಲಿದೆ. ಮಸೀದಿಯ ಸ್ವಾಧೀನದಲ್ಲಿರುವ ಜಾಗವನ್ನು ಪಂಚಾಯತ್‌ನಿಂದ ಕೇವಲ 45 ಸೆಂಟ್ಸ್ ಮಾತ್ರ ಜಾಗ ನೀಡುವ ನಿರ್ಣಯ ಮಾಡಿದ್ದಾರೆ. ಒಂದು ಹಂತದಲ್ಲಿ ಪ್ರತಿಭಟನೆ ಮಾಡಬೇಕಾದದ್ದು ನಾವು. ಆದರೆ ನಾವು ಒಡಂಬಡಿಕೆಯನ್ನು ಒಪ್ಪಿದ್ದೇವೆ. ಈ ಮಧ್ಯೆ ದ್ವೇಷದ ಸಂದೇಶ ಹರಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಸೀದಿಯ ಕಾರ್ಯಾಧ್ಯಕ್ಷ ಎನ್. ಯೂಸೂಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಪಿ.ಕೆ. ಅಬೂಬಕ್ಕರ್, ಮಾಜಿ ಕಾರ್ಯಾಧ್ಯಕ್ಷ ಎನ್.ಎಸ್. ಉಮ್ಮರ್ ಉಪಸ್ಥಿತರಿದ್ದರು.

























