ಕಾರ್ಕಳ: ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವನ್ನು ಕೇವಲ ಸಮುದಾಯ ಮಾತ್ರ ಸೀಮಿತಗೊಳಿಸದೆ, ನಾಡಹಬ್ಬವನ್ನಾಗಿ ಆಚರಿಸುವಲ್ಲಿ ಎಲ್ಲಾ ಪೂರ್ವ ತಯಾರಿಗಳನ್ನು ನಡೆಸಬೇಕಾಗಿದೆ. 2027ರಲ್ಲಿ ಸಂಪನ್ನಗೊಳ್ಳಲಿರುವ ಈ ಮಹಾಮಜ್ಜನದ ವೀಕ್ಷಣೆಗೆ ವಿಶ್ವದ ಮೂಲೆ ಮೂಲೆಗಳಿಂದ ಜನ ಸಾಗರವೇ ಹರಿದು ಬರಲಿದ್ದು, ನಿರಂತರ ಹನ್ನೆರಡು ದಿನಗಳ ಕಾಲ ವೈಭವದಿಂದ ಮುನ್ನಡೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಅವರು ಕಾರ್ಕಳ ದಾನಶಾಲೆ ಶ್ರೀ ಜೈನಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಶ್ರೀಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅನುಮತಿ ಮೇರೆಗೆ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾಮಸ್ತಕಾಭಿಷೇಕದ ಮುನ್ನ ಸಾಕಾಷ್ಟು ಪೂರ್ವ ತಯಾರಿಗಳು ನಡೆಯಬೇಕಾಗಿದೆ. ಅನುದಾನದ ನಿರೀಕ್ಷೆಯನ್ನು ಸರಕಾರದಿಂದ ಅಪೇಕ್ಷಿಸಿದ್ದು, ಪೂರ್ವಭಾವೀಯಾಗಿ ಉದ್ದೇಶಿತ ಎಲ್ಲಾ ಮೂಲ ಸೌಕರ್ಯವನ್ನು ಒದಗಿಸುವ ನಿಟ್ಟಿ ನಲ್ಲಿ ಪ್ರತ್ಯೇಕ ಪಟ್ಟಿ ಸಿದ್ದಪಡಿಸಿ, ಸರಕಾರಕ್ಕೆ ಸಲ್ಲಿಸಬೇಕಾಗಿದೆ. ಅಭಿವೃದ್ದಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ, ಈ ಮಹೋತ್ಸವವು ಅತ್ಯಂತ ಯಶಸ್ವೀಯಾಗಿಸುವಲ್ಲಿ ಸರ್ವ ರೀತಿಯ ಪ್ರಯತ್ನ ನಡೆಸಲಾಗುವುದು ಎಂದರು.
ಕಾರ್ಕಳ ದಾನಶಾಲೆ ಶ್ರೀ ಜೈನಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ, ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆ ಯುವ ಮಹಾ ಮಸ್ತಕಾಭಿಷೇಕವನ್ನು ಯಶಸ್ವೀಗೊಳಿಸುವಲ್ಲಿ ಸಮಾಜದ ಸಹಕಾರ ಅತ್ಯಗತ್ಯ. ಮಹಾಮಸ್ತಕಾಭಿಷೇಕದ ಯಶಸ್ವೀಗೆ ಎಲ್ಲರೂ ಒಂದೇ ಮನಸ್ಸಿನಿಂದ ಒಗ್ಗೂಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಸರಕಾರದಿಂದ ಸಿಗುವ ಅನುದಾನವನ್ನು ಒದಗಿಸಿಕೊಡುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಪಡುಬಿದ್ರಿ ಅರಸು ರತ್ನಾಕರರಾಜ್ ಅರಸು, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿ ವೀರು.ಡಿ.ಶೆಟ್ಟಿ ಎರ್ಮಾಳುಬೀಡು ಸೂರಾಜ್ ಕುಮಾರ್, ಅನಂತ್ರಾಜ್ ಪೂವಣಿ ಉಪಸ್ಥಿತರಿದ್ದರು.
ಅಂಡಾರು ಮಹಾವೀರ ಹೆಗ್ಡೆ ಸ್ವಾಗತಿಸಿದರು, ಯೋಗರಾಜ ಶಾಸ್ತ್ರಿಕಾರ್ಯಕ್ರಮ ನಿರೂಪಿಸಿದರು, ಮೋಹನ್ ಪಡಿವಾಳ್ ವಂದಿಸಿದರು.


























