ಬಂಟ್ವಾಳ: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ತೆರಳಿದ್ದ ಶಿಕ್ಷಕರೊಬ್ಬರ ಮೇಲೆ ಜೇನು ನೊಣಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಶನಿವಾರ ಬಂಟ್ವಾಳ ಸಜೀಪದ ಶಾರದಾನಗರ ಭಜನಾ ಮಂದಿರದ ಬಳಿ ಸಂಭವಿಸಿದೆ.
ಸಜೀಪಮೂಡ ಸರಕಾರಿ ಪ್ರೌಢಶಾಲಾ ಶಿಕ್ಷಕ ವೆಂಕಟರಮಣ ಗಾಯಗೊಂಡವರು. ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಬಂಟ್ವಾಳ ತಾಲೂಕು ಪ್ರಭಾರ ಶಿಕ್ಷಣಾಧಿಕಾರಿ ಬಬಿತಾ ಹಾಗೂ ಇತರ ಅಧಿಕಾರಿಗಳು ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಶನಿವಾರ ಬೆಳಗ್ಗೆ 9ರ ಸುಮಾರಿಗೆ ಅವರು ಒಂದು ಮನೆಯ ಗಣತಿ ಕಾರ್ಯ ಪೂರ್ಣಗೊಳಿಸಿ ಮತ್ತೊಂದು ಮನೆಗೆ ತೆರಳುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿತು.
ಸ್ವಲ್ಪ ಹೊತ್ತು ಮನೆಯಲ್ಲಿ ಆಶ್ರಯ ಪಡೆದ ಅವರು ಸ್ಕೂಟರ್‌ನಲ್ಲಿ ಹೊರಟಾಗ ಮತ್ತೆ ದಾಳಿ ಮಾಡಿದವು. ಸುಮಾರು 2 ಕಿ.ಮೀ. ವರೆಗೂ ಹಿಂಬಾಲಿಸಿಕೊಂಡು ಬಂದು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಕಚ್ಚಿವೆ. ಬಳಿಕ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮಂಗಳೂರಿಗೆ ತೆರಳಿ ಚಿಕಿತ್ಸೆ ಪಡೆದರು. ಅಪಾಯದಿಂದ ಪಾರಾಗಿದ್ದರೂ ಹೆಚ್ಚಿನ ನೋವಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.