ಪುತ್ತೂರು: ಕಾಮಗಾರಿ ನಡೆದ ರಸ್ತೆ ವಾಹನ ಸಂಚಾರಕ್ಕೆ ತೆರೆದುಕೊಂಡ ಎರಡೇ ದಿನದಲ್ಲಿ ಕಿತ್ತು ಹೋಗಿರುವ ಘಟನೆ ನಡೆದಿದ್ದು, ಇದರ ವಿರುದ್ಧ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳ ರಸ್ತೆಯ ಅವ್ಯವಸ್ಥೆ.
ಕೆಟ್ಟು ಹೋದ ರಸ್ತೆಗೆ ಇಂಟರ್ ಲಾಕ್ ಅಳವಡಿಸುವ ಕೆಲಸ ಕಳೆದ 40 ದಿನಗಳ ಹಿಂದೆ ಆರಂಭವಾಗಿತ್ತು. ಆದರೆ ಕಾಮಗಾರಿ ಪೂರ್ತಿಗೊಳಿಸದೇ ಅಂದರೆ 50 ಶೇಕಡಾದಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ನಡುವೆ ಕಳೆದ ಎರಡು ದಿನಗಳ ಹಿಂದೆ ವಾಹನ ಸಂಚಾರಕ್ಕೆ ತೆರೆದುಕೊಂಡಿದೆ. ಅಷ್ಟರಲ್ಲಿ ಇಂಟರ್ ಲಾಕ್ ಎದ್ದು ಹೋಗಿರುವ ಘಟನೆ ನಡೆದಿದೆ.
ಒಂದೆಡೆ ರಸ್ತೆ ಅವ್ಯವಸ್ಥೆ, ಇನ್ನೊಂದೆಡೆ ಕಿತ್ತು ಹೋಗಿರುವ ಇಂಟರ್ ಲಾಕ್. ಒಟ್ಟಿನಲ್ಲಿ ವಾಹನ ಸವಾರರು ಪಡಬಾರದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲಾಖೆಯ ಇಂಜಿನಿಯರ್’ಗಳು, ಗುತ್ತಿಗೆದಾರರು ರಸ್ತೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ರಸ್ತೆಯ ಅವ್ಯವಸ್ಥೆಗೆ ಅದೇಷ್ಟೊ ಮಂದಿ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರು ಹಾಗೂ ವಾಹನ ಸವಾರರ ಅಪೇಕ್ಷೆಯಂತೆ ಕಿತ್ತು ಹೋಗಿರುವ ಇಂಟರ್ ಲಾಕ್ ಗಳನ್ನು ತೆಗೆದು, ರಸ್ತೆಗೆ ಡಾಮರು ಅಥವಾ ಕಾಂಕ್ರೀಟ್ ಹಾಕಬೇಕು. ತಕ್ಷಣವೇ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಾಮಗಾರಿಯನ್ನು ಪೂರ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ವಾಹನ ಚಾಲಕ ಮಾಲಕರು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.