Friday, November 22
Share News

ಭಾರತೀಯ ಆಯುರ್ವೇದ ಪರಂಪರೆಯಲ್ಲಿ ಹಾಗೂ ಚಿಕಿತ್ಸಾ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದ ಅಶ್ವಗಂಧವನ್ನು ಡೆನ್ಮಾರ್ಕ್ ಸರ್ಕಾರ ನಿಷೇಧಿಸಿದೆ.

2020ರ ಮೇ ತಿಂಗಳಲ್ಲಿ ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ಕೊಟ್ಟ ವರದಿಯ ಆಧಾರದ ಮೇಲೆ ಈ ನಿರ್ಧಾರ ಹೊರಬಿದ್ದಿದೆ. ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಆರೋಪದಲ್ಲಿ ಅಶ್ವಗಂಧವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ವರದಿಯಿಂದಾಗಿ ಇದೀಗ ಸ್ವಿಡನ್, ಫಿನ್‌ಲ್ಯಾಂಡ್, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಫ್ರಾನ್ಸ್, ಟರ್ಕಿ ಹಾಗೂ ಯುರೋಪಿಯನ್ ಯೂನಿಯನ್‌ನಲ್ಲಿಯೂ ಕಳವಳ ವ್ಯಕ್ತವಾಗಿದೆ.

ಡೆನ್ಮಾರ್ಕ್ ವರದಿಯಲ್ಲಿ ಏನಿದೆ?
ಲೈಂಗಿಕ ಹಾರ್ಮೋನು ಮತ್ತು ಸಂತಾನೋತ್ಪತ್ತಿಯ ಮೇಲೆ ಅಶ್ವಗಂಧ ನಕರಾತ್ಮಕ ಪರಿಣಾಮ ಬೀರುತ್ತದೆ. ಅಶ್ವಗಂಧ ಗರ್ಭಪಾತಕ್ಕೂ ಕಾರಣವಾಗಲಿದೆ ಎಂದು ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೇ, ಅಶ್ವಗಂಧವು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಥೈರಾಯ್ಡ್ ಗ್ರಂಥಿ ಮೇಲೆ ಹಾಗೂ ಲಿವರ್ ಸಮಸ್ಯೆ ಉಂಟು ಮಾಡಬಹುದು ಎಂದು ಆರೋಪ ಮಾಡಲಾಗಿದೆ.

ಆಯುಷ್ ಸಚಿವಾಲಯ ಹೇಳಿದ್ದೇನು?
ಡೆನ್ಮಾರ್ಕ್ನ ನಿರ್ಧಾರಕ್ಕೆ ಮತ್ತು ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಗೆ ಭಾರತದ ಆಯುಷ್ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ವರದಿಯನ್ನು ಮರುಪರಿಶೀಲಿಸುವ ಅಗತ್ಯ ಇದೆ ಎಂದು ಆಯುಷ್ ಸಚಿವಾಲಯ ಹೇಳಿದೆ. ಅಶ್ವಗಂಧದ ಸುರಕ್ಷತೆ ಬಗ್ಗೆ 400 ಪುಟಗಳ ದಾಖಲೆಗಳಿವೆ. ವರದಿಯಲ್ಲಿ ವೈಜ್ಞಾನಿಕ ಕೊರತೆ ಇರುವುದು ಎದ್ದು ಕಾಣಿಸುತ್ತಿದೆ ಎಂದು ಡೆನ್ಮಾರ್ಕ್ ಮಾಡಿರುವ ಆರೋಪವನ್ನು ಆಯುಷ್ ಸಚಿವಾಲಯ ತಳ್ಳಿ ಹಾಕಿದೆ.

ಅಶ್ವಗಂಧದ ರಫ್ತಿನಲ್ಲಿ ಭಾರತವೇ ಮುಂದು
ಆಯುಷ್ ಸಚಿವಾಲಯದ ಪ್ರಕಾರ, ಭಾರತ ವಿಶ್ವದ ಅತಿದೊಡ್ಡ ಅಶ್ವಗಂಧ ಉತ್ಪಾದಕ ದೇಶ. ಒಂದು ವರ್ಷಕ್ಕೆ 4 ಸಾವಿರ ಟನ್ ಅಶ್ವಗಂಧದ ಬೇರುಗಳನ್ನು ಉತ್ಪಾದನೆ ಮಾಡುತ್ತದೆ. ವಿವಿಧ ದೇಶಗಳಿಗೆ ಅಶ್ವಗಂಧ ಪೂರೈಕೆ ಮಾಡುವ ಪೈಕಿ ಭಾರತದ್ದೇ ಶೇಕಡಾ 42ರಷ್ಟು ಕೊಡುಗೆ ಇದೆ. ಹೀಗಿರುವಾಗ ಡೆನ್ಮಾರ್ಕ್ ದೇಶದ ನಿರ್ಧಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ‘ಸೈಂಟಿಫಿಕ್ ಜರ್ನಲ್ ಆಫ್ ಆಯುರ್ವೇದ ಆ್ಯಂಡ್ ಇಂಟಿಗ್ರೇಟಿವ್ ಮೆಡಿಸಿನ್’ ಕೂಡ ಅನುಮಾನ ವ್ಯಕ್ತಪಡಿಸಿದೆ.

ವರದಿಯ ವೈಜ್ಞಾನಿಕತೆಯನ್ನು ಪರಿಶೀಲಿಸಲು ಆಯುಷ್ ಸಚಿವಾಲಯವು ಪದ್ಮಭೂಷಣ ಪ್ರೊ ಡಾ ಶಿವಕುಮಾರ ಸರಿನ್, ಡಾ ರಾಜೇಶ್ ಖಡ್ಗವತ್, ಡಾ ಭೂಷಣ್ ಪಟವರ್ಧನ್ ಮತ್ತಿತರರ ಸಮಿತಿಯನ್ನು ರಚಿಸಿದೆ.


Share News

Comments are closed.

Exit mobile version