ಬಂಟ್ವಾಳ: ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರ, ಸಿಪಿಎಂ ಪಕ್ಷದ ಮಾಜಿ ಜಿಲ್ಲಾ ಸಮಿತಿ ಸದಸ್ಯ, ಬಂಟ್ವಾಳದಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದ ಕಾಂ.ಸಂಜೀವ ಬಂಗೇರ (87) ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ.
ಮೃತರು ಪತ್ನಿ, ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.
ಸಂಜೀವ ಬಂಗೇರರಿಗೆ ಬಡವರ, ಕಾರ್ಮಿಕರ, ಶೋಷಿತ ಜನತೆಯ ಬಗ್ಗೆ ಅಪಾರ ಕಾಳಜಿ. ಹಾಗಾಗಿ ಬೀಡಿ ಕಾರ್ಮಿಕರಿಗೆ ಆಗುವ ಅನ್ಯಾಯ ಶೋಷಣೆಯನ್ನು ಸಹಿಸಲು ಸಾಧ್ಯವಾಗದೆ ಅವರನ್ನು ಸಂಘಟಿಸಲು ಮುಂದಾದರು. ಬಂಟ್ವಾಳ ತಾಲೂಕಿನಾದ್ಯಂತ ಕಮ್ಯುನಿಸ್ಟ್ ಚಳುವಳಿಯ ವಿಸ್ತರಣೆಗೆ ಅವಿರತವಾಗಿ ಶ್ರಮಿಸಿದರು.
ಸಿಪಿಎಂ ಪಕ್ಷದ ಬಂಟ್ವಾಳ ತಾಲೂಕು ಮುಖಂಡರಾಗಿ, ಜಿಲ್ಲಾ ಸಮಿತಿ ಸದಸ್ಯರಾಗಿ ಅವಿಭಜಿತ ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದ ಸಂಜೀವ ಅಂತಿಮ ಉಸಿರಿನವರೆಗೂ ಕಮ್ಯುನಿಸ್ಟ್ ಪಕ್ಷದ ಬಗ್ಗೆ ಅಪಾರ ಪ್ರೀತಿ, ಮಾರ್ಕ್ಸ್‌ವಾದಿ ಸಿದ್ಧಾಂತದ ಬಗ್ಗೆ ದೃಢವಾದ ವಿಶ್ವಾಸವನ್ನು ಹೊಂದಿದ್ದರು ಎಂದು ಒಡನಾಡಿಗಳು ಸ್ಮರಿಸಿದ್ದಾರೆ.

























