Friday, November 22
Share News

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸನಿಹದ ಏನೇಕಲ್’ನಲ್ಲಿ ನೂತನವಾಗಿ ದಿ ರಾಯಲ್ ಮೊಂಟಾನಾ ಹೋಟೆಲ್ ಮತ್ತು ರೆಸಾರ್ಟ್ ಉದ್ಘಾಟನೆಗೆ ಸಜ್ಜುಗೊಂಡಿದೆ. ಏಪ್ರಿಲ್ 3ರ ಬುಧವಾರ ಬೆಳಗ್ಗೆ 10.30ಕ್ಕೆ ರಾಜ್ಯ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ ಎಂದು ದಿ ರಾಯಲ್ ಮೊಂಟಾನಾ ಛೇರ್’ಮೆನ್ ಹರ್ಷ ಪುಟ್ಟಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ವಹಿಸುವರು. ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪವಿತ್ರ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯ ಜಗದ್ವಿಖ್ಯಾತ. ಕಾನನದೊಳಗಿನ ಪ್ರಶಾಂತ ನಾಗನ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಬರುವವರು ಲಕ್ಷಾಂತರ ಮಂದಿ. ಎದುರಲ್ಲೇ ಕಾಣಿಸುವ ಕುಮಾರ ಪರ್ವತಕ್ಕೆ ಚಾರಣ ಹೋಗುವ ಸಾವಿರಾರು ಮಂದಿ ಪ್ರವಾಸಿಗರೂ ಕುಕ್ಕೆಗೆ ಬಂದೇ ಹೋಗಬೇಕು. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ಯಾತ್ರಾ ತಾಣದಂತೆ, ಪ್ರವಾಸಿ ತಾಣವೂ ಹೌದು. ಹೀಗೆ ಬರುವ ಪ್ರವಾಸಿಗರಿಗೆ ಅಲ್ಲಿಂದ ಕೇವಲ ಆರು ಕಿ.ಮೀ. ದೂರದ ಏನೆಕಲ್ಲು ಗ್ರಾಮದಲ್ಲಿ ಸುಂದರ ರೆಸಾರ್ಟ್‌ ಕೈಬೀಸಿ ಕರೆಯುತ್ತಿದೆ. ಅದುವೇ ‘ಡಿ ರಾಯಲ್ ಮೊಂಟಾನಾ’ ಎಂದರು.

ಸುಬ್ರಹ್ಮಣ್ಯ–ಪುತ್ತೂರು ರಸ್ತೆಯಲ್ಲಿ ಏನೆಕಲ್ಲು ಎಂಬ ಕಾನನದೊಳಗೆ ಹುದುಗಿದ ಊರು ಸಿಗುತ್ತದೆ. ಅದರ ಸಮೀಪದಲ್ಲೇ ಇದೆ ಬೂದಿಪಳ್ಳ ಎಂಬ ಹಸಿರು ಹೊದಿಕೆ ಹೊದ್ದ ಸುಂದರ ಪ್ರದೇಶ. ಅಲ್ಲಿಯೇ ಹೊಸದಾಗಿ ಆರಂಭಗೊಂಡಿದೆ ಡಿ ರಾಯಲ್ ಮೊಂಟಾನಾ ಹೋಟೆಲ್ & ರೆಸಾರ್ಟ್. ಕುಮಾರಧಾರಾ ಸ್ನಾನಘಟ್ಟದಿಂದ ಇಲ್ಲಿಗೆ ಇರುವ ದೂರ ಕೇವಲ 5 ಕಿ.ಮೀ. ಮಾತ್ರ.

ಮೂರು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ವ್ಯಾಪಿಸಿಕೊಂಡಿರುವ ಹಾಗೂ ಪ್ರಕೃತಿ ತನ್ನ ಸೌಂದರ್ಯವೆಲ್ಲವನ್ನೂ ಇಲ್ಲೇ ಅನಾವರಣಗೊಳಿಸುವ ರೀತಿಯ ಲ್ಯಾಂಡ್‌ಸ್ಕೇಪ್‌ ಪರಿಕಲ್ಪನೆಯಲ್ಲಿ ಈ ಹೋಟೆಲ್ & ರೆಸಾರ್ಟ್‌ ನಿರ್ಮಾಣವಾಗಿದ್ದು, ಬೆಂಗಳೂರಿನ ಉದ್ಯಮಿ ಹರ್ಷ ಪುಟ್ಟಪ್ಪ ಅವರ ಕನಸಿನ ಕೂಸು. ಯಾತ್ರಿಕರ ಜತೆಗೆ ಪ್ರವಾಸಿಗರಿಗೆ ಉತ್ತಮ ಸೌಲಭ್ಯದ ಊಟ, ವಸತಿ, ಮನರಂಜನೆ, ಮಕ್ಕಳಿಗೆ ಆಟವಾಡುವ ಸ್ಥಳ, ಈಜುಕೊಳ ಸಹಿತ ಎಲ್ಲಾ ಸೌಲಭ್ಯಗಳೂ ಒಂದೇ ಕಡೆ ಸಿಗಬೇಕು ಎಂಬ ಪರಿಕಲ್ಪನೆಯೊಂದಿಗೆ ಅತ್ಯುತ್ತಮವಾಗಿ ತಲೆ ಎತ್ತಿ ನಿಂತಿದೆ ಏನೆಕಲ್ಲಿನ ಈ ಹೊಸ ಪ್ರವಾಸಿ ನೆಲೆ.

ಆಧುನಿಕ ರೆಸಾರ್ಟ್‌ಗಳಲ್ಲಿ ಇರುವಂತಹ ಲಾನ್‌ ಏರಿಯಾ, ಪ್ಯಾಂಟ್ರಿ ಹೌಸ್‌, ಬ್ಯಾಂಕ್ವೆಟ್‌ ಹಾಲ್‌, ಎಸಿ ಡೈನಿಂಗ್ ಹಾಲ್‌ ಸಹಿತ ಊಟ, ಉಪಾಹಾರ, ಪಾನೀಯ ಸೇವನೆ, ವಿಶ್ರಾಂತಿ, ವಾಕಿಂಗ್‌, ಸ್ವಿಮ್ಮಿಂಗ್‌… ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಒಂದು ಬಾರಿ ಬಂದರೆ ಹೊರ ಪ್ರಪಂಚದ ಜಂಜಡಗಳನ್ನು ಮರೆತುಬಿಟ್ಟು ಹಾಯಾಗಿ ಒಂದೆರಡು ದಿನ ಇಲ್ಲೇ ಕಾಲ ಕಳೆಯುವ ಮನಸ್ಸು ಮಾಡುವುದು ನಿಶ್ಚಿತ.

ಪಂಜುರ್ಲಿ ದೇವಸ್ಥಾನ:
ರೆಸಾರ್ಟ್‌ ಎಂದ ಕೂಡಲೇ ಅದೊಂದು ಕೇವಲ ಮೋಜಿನ ಸ್ಥಳ ಎಂದುಕೊಳ್ಳಬೇಡಿ. ಇಲ್ಲಿ ಪಂಜುರ್ಲಿಯ ದೈವಸ್ಥಾನವೂ ಇದೆ. ಕರಾವಳಿ ಭಾಗದಲ್ಲಿ ಪಂಜುರ್ಲಿಯ ಮಹತ್ವ ಎಲ್ಲರಿಗೂ ಗೊತ್ತಿದ್ದು, ಅವನು ಅಭಯ ನೀಡಿದರೆ ಜೀವನದಲ್ಲಿ ಯಾವ ಭಯವೂ ಇಲ್ಲ ಎಂಬ ನಂಬಿಕೆ ಇದೆ. ಪ್ರವಾಸಿ ನೆಲೆಯನ್ನು ಪವಿತ್ರ ನೆಲೆಯನ್ನಾಗಿ ಈ ದೈವಸ್ಥಾನ ಪರಿವರ್ತಿಸಿದ್ದು, ಇಡೀ ವಾತಾವರಣದಲ್ಲಿ ಭಕ್ತಿಯ ಭಾವದೊಂದಿಗೆ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ ಎಂದರು.

ರೆಸಾರ್ಟ್‌ನಲ್ಲಿ ಒಟ್ಟು 29 ಕೊಠಡಿಗಳಿವೆ. ಎಸಿ ಮತ್ತು ನಾನ್ ಎಸಿ ಕೊಠಡಿಗಳಿದ್ದು, ಎಲ್ಲವೂ ವಿಶಾಲವಾಗಿವೆ, ಶುಚಿಯಾಗಿವೆ. 4 ಕಾಟೇಜ್‌ಗಳಿದ್ದು, ಮಡಿಕೇರಿಯ ಅನುಭವವನ್ನು ಈ ಕಾಟೇಜ್‌ಗಳು ಕುಕ್ಕೆಯ ಪರಿಸರದಲ್ಲಿ ನೀಡುವುದು ನಿಶ್ಚಿತ. ಬಿರು ಬೀಸಿಗೆಯಲ್ಲೂ ಕಾಡೊಳಗಿಂದ ಹರಿದು ಬರುವ ಜಲಜಲಲ ಜಲಧಾರೆ ಇಲ್ಲಿನ ಜೀವಜಲ. ಜತೆಗೆ ಕೊಳವೆಬಾವಿಯಲ್ಲೂ ನೀರು ಲಭ್ಯ ಇದೆ. 100ಕ್ಕೂ ಅಧಿಕ ಕಾರುಗಳ ನಿಲುಗಡೆಗೆ ಇಲ್ಲಿ ಅವಕಾಶ ಇದೆ ಎಂದರು.

ಮದುವೆ ಮಾಡಬಹುದು:
ಮದುವೆ, ಅತಿಥಿ ಸತ್ಕಾರ, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಹಿತ ಸ್ನೇಹಿತರು, ಬಂಧುಬಳಗ ಸೇರಿಕೊಂಡು ಸಮಯ ಕಳೆಯಲು ಇಲ್ಲಿ ಸಾಕಷ್ಟು ಅವಕಾಶ ಇದೆ. ಮದುವೆಯಲ್ಲಿ ಒಂದು ಸಾವಿರ ಮಂದಿಯನ್ನು ನಿಭಾಯಿಸಬಹುದಾದಷ್ಟು ಸ್ಥಳಾವಕಾಶ ಇದ್ದು, ಅದಕ್ಕಾಗಿ ಸುಂದರ ಲಾನ್ ನಿರ್ಮಾಣವಾಗಿದೆ. ಸಣ್ಣ ಪಾರ್ಟಿಗಳಿಗೆ ಸುಮಾರು 400 ಜನರಿಗೆ ಅವಕಾಶ ಇರುವ ಪಾರ್ಟಿ ಹಾಲ್ ಸಹ ಇದೆ.

ಪುಳಿಚಾರ್ ಎಂಬ ವೆಜ್ಜೂ, ಪ್ಯಾರಡೈಸ್ ಎಂಬ ನಾನ್ ವೆಜ್:
ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಿಯರು ಇಷ್ಟಪಡುವ ನಾನಾ ಬಗೆಯ ಕರಾವಳಿ ಮತ್ತು ಇತರ ಎಲ್ಲಾ ಬಗೆಯ ಅಡುಗೆಯನ್ನೂ ಸಿದ್ಧಪಡಿಸಿ ಬಡಿಸುವ ಎರಡು ಪ್ರತ್ಯೇಕ ಹೋಟೆಲ್‌ಗಳು ಇಲ್ಲಿವೆ. ಸಸ್ಯಾಹಾರಿ ಹೋಟೆಲ್‌ಗೆ ‘ಪುಳಿಚಾರ್ ವೆಜ್‌ ರೆಸ್ಟೋರೆಂಟ್‌’ ಎಂಬ ಹೆಸರು ಇಡಲಾಗಿದ್ದರೆ, ನಾನ್‌ವೆಜ್‌ ಹೋಟೆಲ್‌ಗೆ ‘ಪ್ಯಾರಡೈಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌’ ಎಂಬ ಹೆಸರು ಇಡಲಾಗಿದೆ. ಎರಡಕ್ಕೂ ಪ್ರತ್ಯೇಕ ಕಿಚನ್‌ಗಳು ಇರುವುದು ವಿಶೇಷ. ಹೀಗಾಗಿ ಶುದ್ಧ ಸಸ್ಯಾಹಾರಿಗಳು ಸಹ ಇಲ್ಲಿ ಮನಸೋ ಇಚ್ಛೆ ಊಟ ಮಾಡಬಹುದು.

ಯಾತ್ರೆ ಮತ್ತು ಪ್ರವಾಸೋದ್ಯಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಯಾತ್ರೆಗೆ ಹೋಗುವವರೆಲ್ಲರೂ ಪ್ರವಾಸಿಗರೇ, ಪ್ರವಾಸಿಗರು ಎಲ್ಲರೂ ಯಾತ್ರಿಕರಲ್ಲ. ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯ ಹೀಗೆ ಈ ಭಾಗದ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಆಸ್ವಾದಿಸಲು ಬರುವವರಿಗೆ ಈ ಭಾಗದಲ್ಲಿ ನಾಲ್ಕಾರು ದಿನಗಳನ್ನು ನೆಮ್ಮದಿಯಾಗಿ ಕಳೆಯಲು ದಿ ರಾಯಲ್ ಮೊಂಟಾನಾ ರೆಸಾರ್ಟ್ ಅತ್ಯುತ್ತಮ ತಾಣ.

ಕಾಡಿನ ಸಂಪತ್ತು, ಜನಪದ ಸೊಗಡಿನ ಪರಿಚಯ: ಹರ್ಷ ಪುಟ್ಟಪ್ಪ

ಕುಕ್ಕೆ ಸುಬ್ರಹ್ಮಣ್ಯ ನೋಡಲು ಬರುವವರಿಗೆ ಈ ಭಾಗದಲ್ಲಿ ಒಂದೆರಡು ದಿನವನ್ನು ಆರಾಮವಾಗಿ ಕಳೆಯಲು ಅವಕಾಶ ಇರಬೇಕು. ಜತೆಗೆ ಹೊಸದಾಗಿ ಪ್ರವಾಸಕ್ಕೆ ಬರುವವರಿಗೆ ಉತ್ತಮ ಊಟ, ಉಪಚಾರದ ವ್ಯವಸ್ಥೆ ಕಲ್ಪಿಸಬೇಕು ಎಂಬ ಕಾಳಜಿಯಿಂದ ಡಿ ರಾಯಲ್ ಮೊಂಟಾನಾ ಸ್ಥಾಪಿಸಿದ್ದೇವೆ. ಈ ಭಾಗದಲ್ಲಿ ಸಹ ಅದೆಷ್ಟೋ ಬೆಳಕಿಗೆ ಬಾರದ ಪ್ರಾಚೀನ ಸ್ಥಳಗಳಿವೆ. ಕಾಡಿನ ಸಂಪತ್ತು ಇದೆ. ಜಾನಪದ ಸೊಗಡು ಇದೆ. ಅವುಗಳನ್ನು ಪ್ರವಾಸಿಗರಿಗೆ ಪರಿಚಯ ಮಾಡಿಸುವ ಉದ್ದೇಶ ಈ ರೆಸಾರ್ಟ್‌ ಸ್ಥಾಪನೆಯಿಂದ ಈಡೇರಬಹುದು ಎಂಬ ನಿರೀಕ್ಷೆ ನಮ್ಮದು.

ಹರ್ಷ ಪುಟ್ಟಪ್ಪ, ಸಂಸ್ಥಾಪಕರು ಹಾಗೂ ಮುಖ್ಯಸ್ಥರು, ಡಿ ರಾಯಲ್ ಮೊಂಟಾನಾ

ವಿಶಿಷ್ಟ ಅನುಭವ: ಧನುಶ್ರೀ

ಯುವ ಮನಸ್ಸುಗಳು ಬೇರೆ ಏನನ್ನೋ ಬಯಸುತ್ತಿರುತ್ತವೆ. ನಮ್ಮ ಮದುವೆ ಇಂತಲ್ಲೇ ಆಗಬೇಕು. ಸುತ್ತಮುತ್ತಲಿನ ಪರಿಸರ, ಲ್ಯಾಂಡ್‌ಸ್ಕೇಪ್‌ ಹೀಗೆಯೇ ಇರಬೇಕು ಎಂದು ಆಲೋಚಿಸುತ್ತಾರೆ. ಅವರ ಇಷ್ಟಕ್ಕೆ ತಕ್ಕಂತೆ ಇಲ್ಲಿ ಮದುವೆ ಮಾಡಿಕೊಳ್ಳುವ ಸ್ಥಳ ನಿರ್ಮಾಣವಾಗಿದೆ. ಟ್ರೆಕ್ಕಿಂಗ್ ಹೋಗುವವರಿಗೆ ಇಲ್ಲಿ ಸಾಕಷ್ಟು ಅವಕಾಶ ಇದೆ. ಕುಮಾರ ಪರ್ವತದ ಜತೆಗೆ ಸುತ್ತಮುತ್ತಲಿನ ಕಾಡುಗಳಲ್ಲಿ ಸುತ್ತಾಡುವ ವಿಶಿಷ್ಟ ಅನುಭವ, ಪ್ರವಾಸಿಗರಿಗೆ ಮಜಾ ಕೊಡುವ ವಿಶ್ವಾಸ ಇದೆ

ಧನುಶ್ರೀ, ಸಿಇಒ, ಡಿ ರಾಯಲ್ ಮೊಂಟಾನಾ


Share News

Comments are closed.

Exit mobile version