ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಲು ಹೋಗಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂನ ನೆಡುವತ್ತೂರಿನಲ್ಲಿ ನಡೆದಿದೆ.
ಮೃತರನ್ನು ಕೊಟ್ಟಾರಕ್ಕರ ಅಗ್ನಿಶಾಮಕ ಮತ್ತು ರಕ್ಷಣಾ ಘಟಕದ ಅಧಿಕಾರಿ, ಅಟ್ಟಿಂಗಲ್ ಮೂಲದ ಸೋನಿ ಎಸ್. ಕುಮಾರ್ (36), ನೆಡುವತ್ತೂರಿನ ಅರ್ಚನಾ (33), ಮತ್ತು ತ್ರಿಶೂರ್‌ನ ಕೊಡುಂಗಲ್ಲೂರು ಮೂಲದ ಶಿವಕೃಷ್ಣನ್ (22) ಎಂದು ಗುರುತಿಸಲಾಗಿದೆ.
ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ಅರ್ಚನಾ ಮತ್ತು ಶಿವಕೃಷ್ಣನ್ ನಡುವೆ ಜಗಳ ಉಂಟಾಗಿದ್ದು,ಇದರಿಂದ ಸಿಟ್ಟಿಗೆದ್ದಿದ್ದ ಅರ್ಚನಾ 80 ಅಡಿ ಆಳದ ಬಾವಿಗೆ ಹಾರಿದ್ದಾಳೆ. ವಿಷಯ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಕಾರ್ಯಾಚರಣೆಗೆ ಇಳಿಯಿತು.
ಅಗ್ನಿಶಾಮಕದ ಅಧಿಕಾರಿ ಸೋನಿ ಎಸ್. ಕುಮಾರ್ ಅವರು ಬಾವಿಗೆ ಇಳಿಯುತ್ತಿದ್ದಂತೆ, ಬಾವಿಯ ತಡೆಗೋಡೆ ಕುಸಿದು ಅರ್ಚನಾ ಮತ್ತು ಕುಮಾರ್ ಅವರ ಮೇಲೆ ಬಿದ್ದಿದೆ. ಅದೇ ವೇಳೆ ತಡೆಗೋಡೆ ಬಳಿ ನಿಂತಿದ್ದ ಶಿವಕೃಷ್ಣನ್ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಮೂವರನ್ನು ಬಾವಿಯಿಂದ ಮೇಲೆತ್ತಿ ಹತ್ತಿರದ ಆಸ್ಪತ್ರೆಗೆ ಸಾಗಿಸುವ ವೇಳೆ ಮೂವರು ಕೊನೆಯುಸಿರೆಳೆದಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.