ಅಗ್ನಿವೀರ ಯೋಧ ಪ್ರಜ್ವಲ್ (21) ಮೈಸೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಶನಿವಾರ ಸ್ವಗ್ರಾಮ ಜಿಗಳೆಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಪ್ರಜ್ವಲ್ ಅವರು ಎರಡು ವರ್ಷದಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜಿಗಳೆಮನೆಯ ರಾಮಚಂದ್ರ ಮತ್ತು ರಾಜೇಶ್ವರಿ ದಂಪತಿಗಳ ಪುತ್ರರಾದ ಪ್ರಜ್ವಲ್ ಕಳೆದ ವಾರ ರಜೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದರು. ಖಾಸಗಿ ಕಾರ್ಯನಿಮಿತ್ತ ಮೈಸೂರಿಗೆ ಹೋಗಿದ್ದಾಗ ಬೈಕ್ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು. ಶುಕ್ರವಾರ ಸಂಜೆ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗಿತ್ತು.
ಪ್ರಜ್ವಲ್ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನಲ್ಲಿ ತರಬೇತಿ ಮುಗಿಸಿ ಸಿಕ್ಕಿಂನಲ್ಲಿ ಸೇನೆಗೆ ನಿಯೋಜನೆಗೊಂಡಿದ್ದರು. ಬಾಲ್ಯದಿಂದಲೂ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಇಚ್ಛೆ ಪ್ರಜ್ವಲ್ ಹೊಂದಿದ್ದರು. ಅತ್ಯಂತ ಕ್ರಿಯಾಶೀಲವಾಗಿದ್ದ ಆತನ ನಿಧನ ಕುಟುಂಬ ಹಾಗೂ ಸ್ನೇಹಿತರನ್ನು ಘಾಸಿಗೊಳಿಸಿದೆ.
ಶನಿವಾರ ಬೆಳಿಗ್ಗೆ ಯೋಧ ಪ್ರಜ್ವಲ್ ಅವರಿಗೆ ಸರ್ಕಾರದ ವತಿಯಿಂದ ಅಂತಿಮ ಗೌರವ ಸಲ್ಲಿಸಲಾಯಿತು. ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು. ಗ್ರಾಮದ ಸಾವಿರಾರು ಜನರು ಅಂತ್ಯ ಸಂಸ್ಕಾರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ಕಡುಬಡತನದ ಕುಟುಂಬಕ್ಕೆ ಪ್ರಜ್ವಲ್ ಆಸರೆಯಾಗಿದ್ದನು. ಇದೀಗ ಇರುವ ಆಸರೆಯನ್ನು ಸಹ ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಶಾಸಕ ಬೇಳೂರು ಭೇಟಿ: ಶಾಸಕ ಹಾಗೂ ಅರಣ್ಯ ಕೈಗಾರಿಕಾ
ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶನಿವಾರ ಜಿಗಳೆಮನೆ ಗ್ರಾಮಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಮಾತನಾಡಿ, ಪ್ರಜ್ವಲ್ ಎರಡು ವರ್ಷದಿಂದ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕು ಎಂದು ಉತ್ಸಾಹದಲ್ಲಿ ಅಗ್ನಿವೀರ್‌ಗೆ ಸೇರ್ಪಡೆಯಾಗಿದ್ದರು. ಅನೇಕ ಕನಸುಗಳನ್ನು ಹೊತ್ತಿದ್ದ ಪ್ರಜ್ವಲ್ ಕುಟುಂಬಕ್ಕೆ ಆಧಾರವಾಗಿದ್ದರು. ಪ್ರಜ್ವಲ್ ಸಾವು ಅತ್ಯಂತ ಬೇಸರ ತರಿಸಿದೆ. ಕುಟುಂಬ ಸಹ ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲ. ಇಂತಹ ಹೊತ್ತಿನಲ್ಲಿ ಮಗನನ್ನು ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ತಾಲೂಕಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.
























