ನವವದೆಹಲಿ: ಪ್ರಸಿದ್ಧ ಮ್ಯಾರಥಾನ್ ರನ್ನರ್, ಶತಾಯುಷಿ ಫೌಜಾ ಸಿಂಗ್ ಸೋಮವಾರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರು. ಅವರಿಗೆ 114 ವರ್ಷ ವಯಸ್ಸಾಗಿತ್ತು.
ವರದಿಗಳ ಪ್ರಕಾರ, ಸಿಂಗ್ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ಜಲಂಧರ್ ಜಿಲ್ಲೆಯ ಅಧಂಪುರದ ಬಿಯಾಸ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3.30ಕ್ಕೆ ಈ ಘಟನೆ ನಡೆದಿದೆ.
ಕುಟುಂಬದವರು ಹೇಳುವಂತೆ, ಅವರು ತಮ್ಮ ಮನೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್‌ಗೆ ಹೊರಟಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ವಾಹನದ ಮಾಲೀಕರು ಡಿಕ್ಕಿ ಹೊಡೆದ ನಂತರ ವಾಹನೊಂದಿಗೆ ಪರಾರಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಯಸ್ಸಿನ ಹೊರತಾಗಿಯೂ, ಅವರು ಉತ್ತಮ ಆರೋಗ್ಯ ಕಾಯ್ದುಕೊಂಡಿದ್ದರು. ಕೋಲು ಹಿಡಿದುಕೊಂಡು ನಡೆಯುತ್ತಿದ್ದರು. ಅವರು ನಗರದಲ್ಲಿ ನಡೆಯುವ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಎಲ್ಲ ಮ್ಯಾರಥಾನ್‌ಗಳಲ್ಲಿ ಭಾಗವಹಿಸದೇ ಇದ್ದರೂ, ಕ್ರೀಡಾಪಟುಗಳನ್ನು ಹುರಿದುಂಬಿಸುವುದು, ರೇಸ್‌ಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.
ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎನ್ನುವ ದಾಖಲೆ ಹೊಂದಿರುವ ಫೌಜಾ ಸಿಂಗ್, ತಮ್ಮ ಪತ್ನಿ ಮತ್ತು ಮಗ ಅಪಘಾತದಲ್ಲಿ ನಿಧನರಾದಾಗ ತಮ್ಮ 89ನೇ ವಯಸ್ಸಿನಲ್ಲಿ ಓಡಲು ಪ್ರಾರಂಭಿಸಿದರು. ಒಂಟಿತನ ಮತ್ತು ಖಿನ್ನತೆಯ ವಿರುದ್ಧ ಹೋರಾಡಲು ಅವರು ಓಟವನ್ನು ಪ್ರಾರಂಭಿಸಿದರು. ಅವರು ಅಂತಿಮವಾಗಿ 2000 ರಲ್ಲಿ ಲಂಡನ್‌ನಲ್ಲಿ ಪ್ರಾರಂಭವಾದ 18 ಮ್ಯಾರಥಾನ್‌ಗಳಲ್ಲಿ ಓಡಿದರು. ಅವರ ಕೊನೆಯ ಮೂರು ಮ್ಯಾರಥಾನ್‌ಗಳಾದ 2011 ರಲ್ಲಿ ಟೊರೊಂಟೊ, 2012 ರಲ್ಲಿ ಲಂಡನ್ ಮತ್ತು 2013ರ ಹಾಂಕಾಂಗ್ ಮ್ಯಾರಥಾನ್ ಬಳಿಕ ಅವರು ನಿವೃತ್ತರಾದರು.
102ನೇ ವರ್ಷದವರೆಗೂ ಅವರು ಮ್ಯಾರಥಾನ್‌ಗಳಲ್ಲಿ ಭಾಗವಹಿಸುತ್ತಲೇ ಇದ್ದರೂ, ಅವರ ಜನ್ಮ ದಿನಾಂಕವನ್ನು ದೃಢೀಕರಿಸಲು ಯಾವುದೇ ದಾಖಲೆಗಳಿಲ್ಲದ ಕಾರಣ ಅವರನ್ನು ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿಸಲು ಸಾಧ್ಯವಾಗಲಿಲ್ಲ. ತೆಳ್ಳಗಿನ, ಎತ್ತರದ, ಸರಳ, ಸಸ್ಯಾಹಾರಿ ವ್ಯಕ್ತಿಯಾಗಿದ್ದ ಅವರು, ಪೆಟಾ ಅಭಿಯಾನಗಳಲ್ಲಿಯೂ ಕಾಣಿಸಿಕೊಂಡರು. ಅವರು ‘ಇಂಪಾಸಿಬಲ್ ಈಸ್ ನಥಿಂಗ್’ ಅಭಿಯಾನದಲ್ಲಿ ಅಡಿಡಾಸ್ ಪೋಸ್ಟರ್ ಬಾಯ್ ಕೂಡ ಆಗಿದ್ದರು.
ಅವರ ನಿಧನಕ್ಕೆ ಪ್ರತಿಕ್ರಿಯಿಸಿದ ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, “ದಿ ಲೆಜೆಂಡರಿ ಮ್ಯಾರಥಾನ್ ಓಟಗಾರ ಮತ್ತು ಭರವಸೆಯ ಶಾಶ್ವತ ಸಂಕೇತವಾಗಿದ್ದ ಸರ್ದಾರ್ ಫೌಜಾ ಸಿಂಗ್ ಜಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. 114 ನೇ ವಯಸ್ಸಿನಲ್ಲಿಯೂ ಸಹ, ಅವರು ತಮ್ಮ ಶಕ್ತಿ ಮತ್ತು ಬದ್ಧತೆಯಿಂದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದ್ದರು ಎಂದಿದ್ದಾರೆ.