ಶಿವಮೊಗ್ಗ: ತರಬೇತಿ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ವಾಯುಪಡೆಯ ವಾರೆಂಟ್ ಅಧಿಕಾರಿ ಮಂಜುನಾಥ್ ಜಿ.ಎಸ್ (36) ಉತ್ತರ ಪ್ರದೇಶದ ಆಗ್ರಾದಲ್ಲಿ ಮೃತಪಟ್ಟಿದ್ದಾರೆ.
ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್ ಡ್ರಾಪ್ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರು. ಆದರೆ ವಾರಂಟ್ ಆಫೀಸರ್ ಮಂಜುನಾಥ್ ಜಿ.ಎಸ್ ನಾಪತ್ತೆಯಾಗಿದ್ದರು ಎಂದು ವರದಿಯಾಗಿತ್ತು.
ಮಂಜುನಾಥ್ ಅವರಿಗಾಗಿ ಶೋಧ ಕಾರ್ಯ ನಡೆಸಿದಾಗ ಸಮೀಪದ ಜಮೀನಿನಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಂಜುನಾಥ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವಿಮಾನದಿಂದ ಹಾರಿದ ನಂತರ ಪ್ಯಾರಾಚೂಟ್ ತೆರೆದುಕೊಳ್ಳದೆ ಮಂಜುನಾಥ್ ಅವರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಹಿಂದೆಯು ಇಂತಹ ಘಟನೆಗಳು ಸಂಭವಿಸಿ ವಾಯುಪಡೆಯ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ