ಪುತ್ತೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಲ್ಲಿನ ಕೊಂಬೆಟ್ಟು ನಿವಾಸಿ, ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋ (55 ವ.) ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಂತ್ರಸ್ತ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು 2021 ಅಕ್ಟೋಬರ್ 23ರಂದು ಸ್ಪೋರ್ಟ್ಸ್ ಪ್ರಾಕ್ಟೀಸ್ ಸಮಯದಲ್ಲಿ ಕಿರುಕುಳ ನೀಡಿದ ಆರೋಪ ಎಲಿಯಾಸ್ ಪಿಂಟೋ ಅವರ ಮೇಲಿತ್ತು. ಬಾಲಕಿ ಓಡಿ ಜಿಮ್ ಕೊಠಡಿಯ ವರಾಂಡದಲ್ಲಿ ನಿಂತಿದ್ದಾಗ, ಆತ ಬಾಲಕಿಯನ್ನು ಕೊಠಡಿಗೆ ಕರೆದುಕೊಂಡು ಹೋಗಿ ಸೊಂಟ ನೋವಿಗೆ ಮಸಾಜ್ ಮಾಡುವುದಾಗಿ ಹೇಳಿ, ಆಕೆಯ ಪ್ರತಿರೋಧದ ಹೊರತಾಗಿಯೂ ದೈಹಿಕವಾಗಿ ಕಿರುಕುಳ ನೀಡಿದ್ದ. ಬಾಲಕಿಯ ಪ್ಯಾಂಟ್ ಜಾರಿಸಲು ಯತ್ನಿಸಿದ್ದು, ಟೀ ಶರ್ಟ್ ಮೇಲೆತ್ತಿ ಹೊಟ್ಟೆ ಮತ್ತು ಎದೆಯನ್ನು ಮುಟ್ಟಿ ಮಾನಭಂಗ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 19 ಸಾಕ್ಷಿಗಳನ್ನು ವಿಚಾರಿಸಲಾಗಿದ್ದು, ಸಂತ್ರಸ್ತ ಬಾಲಕಿ ಸವಿವರವಾದ ಹೇಳಿಕೆ ನೀಡಿದ್ದಳು. ತನಿಖಾಧಿಕಾರಿ ತಿಮ್ಮಪ್ಪ ನಾಯ್ಕರು ಸಾಕ್ಷ್ಯಗಳನ್ನು ನೀಡಿದ್ದರು.
ನ್ಯಾಯಾಧೀಶೆ ಸರಿತಾ ಡಿ. ಅವರು ಎರಡೂ ಕಡೆಯ ವಾದಗಳನ್ನು ಆಲಿಸಿ, ಪೋಕ್ಸೋ ಕಾಯ್ದೆ ಕಲಂ 10ರ ಅಡಿ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹20,000 ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದರೆ 6 ತಿಂಗಳ ಹೆಚ್ಚುವರಿ ಶಿಕ್ಷೆ. ಭಾರತೀಯ ದಂಡ ಸಂಹಿತೆ ಕಲಂ 354(ಎ) ಅಡಿ 3 ವರ್ಷಗಳ ಶಿಕ್ಷೆ ಮತ್ತು ₹10,000 ದಂಡ ವಿಧಿಸಲಾಗಿದ್ದು, ದಂಡ ತಪ್ಪಿದರೆ 3 ತಿಂಗಳ ಹೆಚ್ಚುವರಿ ಶಿಕ್ಷೆ. ದಂಡದಲ್ಲಿ ₹20,000 ಅನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ಆದೇಶಿಸಲಾಗಿದೆ. ಇದರ ಜೊತೆಗೆ ದಂಡ ಪ್ರಕ್ರಿಯಾ ಸಂಹಿತೆ ಕಲಂ 357ಎ ಅಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ₹20,000 ಪರಿಹಾರ ನೀಡಲು ನಿರ್ದೇಶಿಸಲಾಗಿದೆ.
ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯರು ವಾದ ಮಂಡಿಸಿದ್ದರು.























