ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಶುಲ್ಕ ಪಾವತಿಸಲು ನಿರಾಕರಿಸಿ, ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಟೋಲ್ ಇಂಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ನಿವಾಸಿ ಪ್ರಶಾಂತ್ ಬಿ. (25) ನೀಡಿದ ದೂರಿನಂತೆ, ಡಿಸೆಂಬರ್ 29, 2025ರ ಮುಂಜಾನೆ ಕೆಎ–18 ಸಿ–3048 ನೋಂದಣಿ ಸಂಖ್ಯೆಯ ಟಾಟಾ ಲಾರಿ ವಿರುದ್ಧ ದಿಕ್ಕಿನಲ್ಲಿ ಟೋಲ್ ಗೇಟ್‌ಗೆ ಬಂದಿತ್ತು. ಸಿಬ್ಬಂದಿಗಳು ಟೋಲ್ ಹಣ ಕೇಳಿದಾಗ ಲಾರಿ ಚಾಲಕ ಹಣ ಪಾವತಿಸಲು ನಿರಾಕರಿಸಿ, ಲಾರಿಯನ್ನು ಮುಂದಕ್ಕೆ ಚಲಾಯಿಸಿ ಟೋಲ್ ಗೇಟ್‌ಗೆ ಹಾನಿ ಉಂಟುಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಾದ ಬಳಿಕ ಲಾರಿ ಚಾಲಕ ಹಾಗೂ ಮತ್ತೊಬ್ಬ ಆರೋಪಿಯು ಟೋಲ್ ಸಿಬ್ಬಂದಿಗಳಾದ ಅಂಕಿತ್ ಮತ್ತು ರೋಹಿತ್ ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಮತ್ತೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರನ್ನು ಕರೆದುಕೊಂಡು ಬಂದು ಟೋಲ್ ಬೂತ್ ಒಳಗೆ ಅಕ್ರಮವಾಗಿ ಪ್ರವೇಶಿಸಿ ಮತ್ತೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಕ್ರ.ಸಂ. 154/2025ರಂತೆ BNS–2023ರ ಕಲಂ 329(3), 351(2), 352, 115(2), 118(1), 324(2) r/w 3(5) ಹಾಗೂ ಮೋಟಾರ್ ವಾಹನ ಕಾಯ್ದೆ ಕಲಂ 184(E) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಚಿಕ್ಕಮಗಳೂರು ಮೂಲದ ಲಾರಿ ಚಾಲಕ ಭರತ್ (23) ಹಾಗೂ ಕ್ಲೀನರ್ ತೇಜಸ್ (26) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



























