ಬಂಟ್ವಾಳ: ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆಯಲ್ಲಿ ಯಾರನ್ನೋ ನಿಲ್ಲಿಸಿ ಹೋದವರನ್ನು ಯಾಮಾರಿಸಿ ಸುಳ್ಳು ಹೇಳಿ ಕಳ್ಳತನ ಮಾಡುವ ಕೃತ್ಯಗಳು ಹೆಚ್ಚಾಗುತ್ತಿದೆ. ರವಿವಾರ ಬಂಟ್ವಾಳದ ಇರಾ ಗ್ರಾಮವೊಂದರ ಮನೆಗೆ ಇದೇ ರೀತಿಯಲ್ಲಿ ನುಗ್ಗಿ ನಗ-ನಗದು ದೋಚಿರುವ ಘಟನೆ ನಡೆದಿದೆ.
ಇರಾ ಗ್ರಾಮದ ಕುರಿಯಾಡಿ ಪದ್ಮನಾಭ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಅವರ ಮಗಳ ಮದುವೆಗಾಗಿ ಮನೆ ಮಂದಿ ಮಂಜೇಶ್ವರ ಪೈವಳಿಕೆಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಇಬ್ಬರು ಮಹಿಳೆಯರನ್ನು ನಿಲ್ಲಿಸಿ ಹೋಗಿದ್ದರು. ಮಧ್ಯಾಹ್ನ 1ರ ಸುಮಾರಿಗೆ ಮನೆಗೆ ಬೈಕಿನಲ್ಲಿ ಬಂದಾತ ಅಂಗಡಿ ಪದ್ಮಣ್ಣ ಅವರು ಮನೆಯಲ್ಲಿ ವಿದ್ಯುತ್ ಸರಿಯಿಲ್ಲ ಎಂದು ದುರಸ್ತಿಗೆ ಬರುವುದಕ್ಕೆ ಹೇಳಿದ್ದಾರೆ ಎಂದು ಹೇಳಿ ಮನೆಯ ಒಳಗೆ ನುಗ್ಗಿದ್ದಾನೆ.
ಒಳಗೆ ಹೋದಾಗ ವಿದ್ಯುತ್ ಫ್ಯೂಸ್ ಗಳನ್ನು ನೋಡಿ ದುರಸ್ತಿಯ ನಾಟಕವಾಡಿದ್ದು, ಮಹಿಳೆಯರನ್ನು ನೆಲದಲ್ಲಿ ನಿಲ್ಲಬೇಡಿ ಮರದ ಮಣೆಯಲ್ಲಿ ನಿಲ್ಲುವಂತೆ ಹೇಳಿದ್ದಾನೆ. ಅಲ್ಲಿಂದ ನೇರವಾಗಿ ಕೋಣೆಗೆ ಹೋಗಿದ್ದು, ಆಗ ಮಹಿಳೆ ಹಿಂದಿನಿಂದ ಹೋದಾಗ ನೀವು ಬರಬೇಡಿ. ಶಾಕ್ ಹೊಡೆಯುತ್ತದೆ ಎಂದು ಹೇಳಿ ಮಹಿಳೆಯರು ಕೋಣೆಗೆ ಬರದಂತೆ ನೋಡಿಕೊಂಡಿದ್ದಾನೆ. ಕೋಣೆಗೆ ಹೋದಾತ 20 ಸಾವಿರ ನಗದು ಹಾಗೂ ಸುಮಾರು 2 ಪವನ್ ತೂಕದ ಒಂದು ಜತೆ ಕಿವಿಯ ಬೆಂಡೋಲೆಯನ್ನು ದೋಚಿದ್ದಾನೆ.
ಮದುವೆ ಮುಗಿಸಿ ಮನೆಮಂದಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳ ಕೃತ್ಯ ಮುಗಿಸಿ ತೆರಳುವಾಗ ಪಕ್ಕದ ಮನೆಗೂ ವಿದ್ಯುತ್ ದುರಸ್ತಿಗೆ ಬರಲು ಹೇಳಿದ್ದಾರೆ ಎಂದು ಮನೆಯ ಬಳಿ ಹೋಗಿದ್ದು, ಅಲ್ಲಿ ಯಾರೂ ಇಲ್ಲ ಎಂದು ಮಹಿಳೆಯರು ಹೇಳಿದಾಗ ಅಲ್ಲಿಂದ ತೆರಳಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಮತ್ತು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇರಾ ಗ್ರಾಮದ ಪಕ್ಕದ ಗ್ರಾಮವಾದ ಸಜೀಪನಡು ಗ್ರಾಮದಲ್ಲೂ ನ. 23ರಂದು ಕೂಡ ಇದೇ ರೀತಿಯ ಕೃತ್ಯ ನಡೆದಿದ್ದು, ದೇರಾಜೆ ನಿವಾಸಿ ದೀಕ್ಷಿತ್ ಅವರ ಮನೆಗೆ ನುಗ್ಗಿದ್ದ ಕಳ್ಳನೋರ್ವ ಮನೆಯಲ್ಲಿದ್ದ ಮಹಿಳೆಯ ಬಳಿ ವಿದ್ಯುತ್ ದುರಸ್ತಿಯ ನಾಟಕವಾಡಿ ಚಿನ್ನಾಭರಣ ದೋಚಿದ್ದಾನೆ. ಇರಾ ಗ್ರಾಮದ ಮನೆಗೂ ಅದೇ ಕಳ್ಳ ನುಗ್ಗಿದ್ದಾನೋ ಅಥವಾ ಇದೇ ರೀತಿಯ ದಂಧೆಯಲ್ಲಿ ತೊಡಗಿರುವ ತಂಡವಿದೆಯೇ ಎಂಬ ಸಂಶಯ ಮೂಡಿದೆ. ಬೇರೆ ಭಾಗದಲ್ಲೂ ಇಂತಹ ಕೃತ್ಯಗಳು ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
























