ಬೆಂಗಳೂರು: ನಕಲಿ ವೈದ್ಯಕೀಯ ದಾಖಲೆಗಳನ್ನು ಒದಗಿಸಿ ಅಂಗವಿಕಲರ ಕೋಟಾದಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದವರಿಗೆ ಸಹಾಯ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಮಲ್ಲೇಶ್ವರಂ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು: ಬೆಂಗಳೂರಿನ ನಂದಿನಿ ಲೇಔಟ್‌ನ ಶಿಕ್ಷಕ ಭರಮಪ್ಪ, ಹೊಸಪೇಟೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಚೌಧರಿ, ಮತ್ತು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ಸುಧಾಕರ್. ಆರೋಪಿಗಳಿಂದ ನಕಲಿ ದಾಖಲೆಗಳು ಮತ್ತು ಅವುಗಳನ್ನು ತಯಾರಿಸಲು ಬಳಸಿದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ನೇಮಗೌಡ ತಿಳಿಸಿದ್ದಾರೆ. ಸುಧಾಕರ್‌ನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಕೊಪ್ಪಳ ಡಿಎಚ್‌ಒ ಡಾ. ಲಿಂಗರಾಜು ದೃಢಪಡಿಸಿದ್ದಾರೆ.
ತನಿಖೆಯಿಂದ ಆರೋಪಿಗಳು ನಕಲಿ ದಾಖಲೆಗಳನ್ನು ತಯಾರಿಸಿ ಅಭ್ಯರ್ಥಿಗಳಿಗೆ ನೀಡುತ್ತಿದ್ದದ್ದು ಬಯಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರ ಸೂಚನೆಯಂತೆ, ಮುಖ್ಯ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ್ ಅವರು 21 ಅಭ್ಯರ್ಥಿಗಳು ಮತ್ತು ನಕಲಿ ದಾಖಲೆ ತಯಾರಿಕೆಗೆ ಸಹಕರಿಸಿದ ನಾಲ್ವರ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಮೊದಲ ಹಂತದಲ್ಲಿ ಮೂವರನ್ನು ಬಂಧಿಸಿದ್ದಾರೆ.
21 ಅಭ್ಯರ್ಥಿಗಳು ಶ್ರವಣ ದೋಷವಿದೆ ಎಂದು ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದರು. ಇವರಲ್ಲಿ ಹೆಚ್ಚಿನವರು ವಿಜಯನಗರ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಿಂದ ಯುಡಿ ಐಡಿ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ಪಡೆದಿದ್ದರು. ಈ ಯುಡಿ ಐಡಿಗಾಗಿ ಇತ್ತೀಚೆಗೆ ತೆಗೆದುಕೊಂಡ ನಕಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಒದಗಿಸಿದ್ದರು. ದಾಖಲೆಗಳ ಪರಿಶೀಲನೆಯಲ್ಲಿ ಈ ಪ್ರಮಾಣಪತ್ರಗಳು ನಕಲಿ ಎಂದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
























