ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಬಜಪೆ ಪೋಲೀಸರು ತಮಿಳುನಾಡಿನ ವೆಲ್ಲೂರಿನಿಂದ ಬಂಧಿಸಿದ್ದಾರೆ.
ವೆಲ್ಲೂರು ಜಿಲ್ಲೆಯ ಸಸಿಕುಮಾರ್ (38) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.
ಆ. 29 ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ್ದ ಈತ ” ಟರ್ಮಿನಲ್ ಬಿಲ್ಡಿಂಗ್ ಖಾಲಿ ಮಾಡಬೇಕು, ಇಲ್ಲವಾದರೆ ಧ್ವಂಸ ಮಾಡುವೆ ” ಎಂದು ಬೆದರಿಕೆ ಹಾಕಿದ್ದನು. ಈ ಸಂಬಂಧ ಟರ್ಮಿನಲ್ ವ್ಯವಸ್ಥಾಪಕರು ಬಜಪೆ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ “ದೇಶದ ಎಲ್ಲ ವಿಮಾನ ನಿಲ್ದಾಣಗಳ ನಂಬರ್ ಗೂಗಲ್ ಮೂಲಕ ಪಡೆದು, ಕರೆ ಮಾಡಿ ಬೆದರಿಕೆ ಹಾಕಿದ್ದೇನೆ” ಎಂಬ ಮಾಹಿತಿ ದೊರೆತಿದೆ. ಆರೋಪಿಯನ್ನು ಮಂಗಳೂರಿಗೆ ಕರೆತರಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ನಗರ ಪೋಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.