ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಟೊಯೊಟಾ ಇನೊವಾ ಕಾರು 2024 ರಿಂದ ಇಲ್ಲಿಯವರೆಗೆ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ನಗರದ ವಿವಿಧ ಜಂಕ್ಷನ್‌ಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಶೇ. 50 ರಿಯಾಯಿತಿಯಡಿ ದಂಡ ಪಾವತಿಗೆ ಅವಕಾಶ ಕಲ್ಪಿಸಿದ್ದು. ಈಗಾಗಲೇ ಎಲ್ಲಾ ದಂಡವನ್ನು ಪಾವತಿಸಲಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಸೀಟು ಬೆಲ್ಟ್ ಉಲ್ಲಂಘನೆ: ಆರು ಪ್ರಕರಣಗಳು
ಆರು ಪ್ರಕರಣಗಳಲ್ಲಿ ಮುಖ್ಯಮಂತ್ರಿ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾರೆ. ಶೇ 50ರಷ್ಟು ರಿಯಾಯಿತಿ ಅನುಸಾರ ₹2,500 ರೂಪಾಯಿ ದಂಡವಿತ್ತು. ಸಿದ್ದರಾಮಯ್ಯ ಅವರು ಕಾರಿನ ಮುಂಭಾಗದಲ್ಲಿ ಕುಳಿತುಕೊಂಡಾಗ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿರುವ ದೃಶ್ಯಾವಳಿಯು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂನಲ್ಲಿ (ಐಟಿಎಂಎಸ್) ಸೆರೆಯಾಗಿದೆ.
2024ರ ಜನವರಿ 24ರಂದು ಮಧ್ಯಾಹ್ನ 12.19ರಂದು ಹಳೇ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಸಾಗುವಾಗ ಸಿದ್ದರಾಮಯ್ಯ ಅವರು ಸೀಟು ಬೆಲ್ಟ್ ಧರಿಸಿರಲಿಲ್ಲ. ಅದೇ ಜಂಕ್ಷನ್‌ನಲ್ಲಿ ಫೆಬ್ರುವರಿ ಹಾಗೂ ಆಗಸ್ಟ್‌ನಲ್ಲಿ ಮತ್ತೆರಡು ಪ್ರಕರಣಗಳು ದಾಖಲಾದರೆ, ಮಾರ್ಚ್‌ನಲ್ಲಿ ಚಂದ್ರಿಕಾ ಹೊಟೇಲ್ ಜಂಕ್ಷನ್ ಹಾಗೂ ಆಗಸ್ಟ್‌ನಲ್ಲಿ ಶಿವಾನಂದ ವೃತ್ತ ಹಾಗೂ ಡಾ. ರಾಜ್ ಕುಮಾರ್ ಪ್ರತಿಮೆ ಜಂಕ್ಷನ್‌ಗಳ ಬಳಿ ಸೀಟು ಬೆಲ್ಟ್ ಧರಿಸಿದೆ ನಿಯಮ ಉಲ್ಲಂಘಿಸಿರುವುದು ದಾಖಲಾಗಿದೆ.
ಜುಲೈ 9ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಮುಖ್ಯಮಂತ್ರಿ ಅವರಿದ್ದ ಕಾರು ಅತಿವೇಗದಿಂದ ಹೋಗುವ ಮೂಲಕ ನಿಯಮ ಉಲ್ಲಂಘಿಸಿರುವುದು ಐಟಿಎಂಎಸ್ ನಲ್ಲಿ ದಾಖಲಾಗಿದೆ. ಸದ್ಯ ಕಾರಿನ ಮೇಲಿದ್ದ ದಂಡ ಪಾವತಿಯಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.