ಬಂಟ್ವಾಳ: ಜಮೀನಿನ ಪೌತಿ ಖಾತೆ ಮಾಡಿಕೊಡುವ ಕಾರ್ಯಕ್ಕೆ ಸಂಬಂಧಿಸಿದಂತೆ ಲಂಚ ಬೇಡಿಕೆಯ ಪ್ರಕರಣದಲ್ಲಿ ಬುಧವಾರ ಅಪರಾಹ್ನ ಲೋಕಾಯುಕ್ತ ಅಧಿಕಾರಿಗಳು ಬಂಟ್ವಾಳ ತಹಶೀಲ್ದಾರ್ ಕಚೇರಿಗೆ ದಿಢೀರ್ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಾಗಿ ಬಂಟ್ವಾಳ ತಾಲೂಕು ಕಂದಾಯ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ, ಕೇಸ್ ವರ್ಕರ್ ಸಂತೋಷ್ ಹಾಗೂ ಮಧ್ಯವರ್ತಿ ಬೋಕರ್ ಗಣೇಶ್ ವಾಮದಪದವು ಗುರುತಿಸಿಕೊಂಡಿದ್ದಾರೆ.
ಸಜಿಪಮುನ್ನೂರು ಗ್ರಾಮದ ನಿವಾಸಿ ದೂರುದಾರರು ತಮ್ಮ ತಾಯಿಯ ಪೌತಿ ಖಾತೆ ವಿಚಾರದಲ್ಲಿ 2021ರಲ್ಲಿ ಅರ್ಜಿ ಸಲ್ಲಿಸಿದ್ದರೂ, ಜಿಲ್ಲಾಧಿಕಾರಿ ನ್ಯಾಯಾಲಯ ಮತ್ತು ಸಹಾಯಕ ಆಯುಕ್ತರ ನ್ಯಾಯಾಲಯದಿಂದ ಆದೇಶ ಬರುವವರೆಗೆ ಕಡತ ಬಾಕಿ ಉಳಿದಿತ್ತು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ 20 ಸಾವಿರ ರೂ. ಹಾಗೂ ಕೇಸ್ ವರ್ಕರ್ ಸಂತೋಷ್ ಒಂದೂವರೆ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ, ಎಸ್ಪಿ ಕುಮಾರಚಂದ್ರ ನೇತೃತ್ವದ ತಂಡ ಬಂಟ್ವಾಳದಲ್ಲಿ ಬಲೆ ಬೀಸಿ, ಮಧ್ಯವರ್ತಿ ಗಣೇಶ್ ಮೂಲಕ 20 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಆರೋಪಿಗಳನ್ನು ಬಣ್ಣ ಹಚ್ಚಿದ ನೋಟುಗಳೊಂದಿಗೆ ಬಂಧಿಸಿತು.
ತಹಶೀಲ್ದಾರ್ ಅವರ ಪಾತ್ರದ ಮೇಲೂ ತನಿಖೆ ನಡೆಯುತ್ತಿರುವುದಾಗಿ ಲೋಕಾಯುಕ್ತ ಎಸ್ಪಿ ತಿಳಿಸಿದ್ದಾರೆ. ದಾಳಿ ವೇಳೆ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಇನ್ಸ್‌ಪೆಕ್ಟರ್ ಭಾರತಿ ಬಿ, ಚಂದ್ರಶೇಖರ್ ಕೆ.ಎನ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಕೆ. ರಾಜು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.