ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶನಿವಾರ ಸಂಜೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಉತ್ತರಕನ್ನಡದ ನಿವಾಸಿ ಕೀರಪ್ಪ (54) ಎಂದು ಗುರುತಿಸಲಾಗಿದೆ. ಅವರು ಶಿರಸಿ ಠಾಣೆಯಿಂದ ಸುಮಾರು 5 ತಿಂಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು. ಅವರ ಕುಟುಂಬ ಉತ್ತರ ಕನ್ನಡದಲ್ಲಿಯೇ ವಾಸವಿದ್ದು, ಕೀರಪ್ಪ ಬಂಟ್ವಾಳ ಪೇಟೆಯಲ್ಲಿ ಒಬ್ಬರೇ ಬಾಡಿಗೆಗೆ ವಾಸವಿದ್ದರು.
ಶನಿವಾರ ಬೆಳಿಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗದೇ, ಫೋನ್ ಕರೆಗಳಿಗೆ ಪ್ರತಿಕ್ರಿಯೆ ನೀಡದೇ ಇದ್ದ ಕಾರಣದಂತೆ ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗೆ ಅನುಮಾನ ಉಂಟಾಗಿ, ಅವರು ವಾಸಿಸುತ್ತಿದ್ದ ಮನೆಗೆ ತೆರಳಿದ್ದರು. ಮನೆಯ ಬಾಗಿಲು ಲಾಕ್‌ನಲ್ಲಿದ್ದು, ಹೊರಗಿಂದ ಕರೆದಾಗ ಪ್ರತಿಕ್ರಿಯೆ ಇಲ್ಲದ ಕಾರಣ ಕಿಟಕಿಯಿಂದ ನೋಡಿದಾಗ ಅವರು ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ದೃಷ್ಟಿಗೊಡಿದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.





















