ಮಂಗಳೂರು: ನಗರದ ಅವತಾರ್ ಹೋಟೆಲ್‌ನಲ್ಲಿ ನಡೆದ ಟೈಮ್ಸ್ ವ್ಯಾಪಾರ ಪ್ರಶಸ್ತಿ–2026 ಸಮಾರಂಭದಲ್ಲಿ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಸಾಧನೆಗೈದ ಯು ಆರ್ ಪ್ರಾಪರ್ಟೀಸ್ ಸಂಸ್ಥೆಗೆ “ರಿಯಲ್ ಎಸ್ಟೇಟ್ ಡೆವಲಪರ್ ಆಫ್ ದ ಇಯರ್”ಪ್ರಶಸ್ತಿ ಪ್ರದಾನಿಸಲಾಯಿತು. ಖ್ಯಾತ ದಿನಪತ್ರಿಕೆ ಸಂಸ್ಥೆ ದ ಟೈಮ್ಸ ಆಫ್ ಇಂಡಿಯಾ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಭಾಗಗಳ ವಿವಿಧ ಕ್ಷೇತ್ರಗಳ ಉದ್ಯಮಿಗಳು ಭಾಗವಹಿಸಿದ್ದರು.
ಪುತ್ತೂರು ಸೇರಿದಂತೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಯು ಆರ್ ಪ್ರಾಪರ್ಟೀಸ್ ಸಂಸ್ಥೆ ಗೃಹ ನಿರ್ಮಾಣ ವಿಭಾಗದಲ್ಲಿ ನೀಡಿದ ಸೇವೆ ಮತ್ತು ಯೋಜನೆಗಳ ಗುಣಮಟ್ಟದ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆಯಾಯಿತು. ಸಂಸ್ಥೆಯ ಮುಖ್ಯಸ್ಥ ಉಜ್ವಲ್ ಪ್ರಭು, ಕುಟುಂಬಸ್ಥರು ಮತ್ತು ಸಿಬ್ಬಂದಿಗಳು ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟು ಸೈನಾ ನೆಹ್ವಾಲ್ ಪ್ರಶಸ್ತಿಗಳನ್ನು ಪ್ರದಾನಿಸಿದರು.2014ರಲ್ಲಿ ಸ್ಥಾಪಿತವಾದ ಯು ಆರ್ ಪ್ರಾಪರ್ಟೀಸ್ ಸಂಸ್ಥೆ ಮಂಗಳೂರು–ಪುತ್ತೂರು ಭಾಗಗಳಲ್ಲಿ ಇದುವರೆಗೆ ಸುಮಾರು 19 ಗೃಹ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಗುಣಮಟ್ಟದ ನಿರ್ಮಾಣ ಹಾಗೂ ಗ್ರಾಹಕರ ವಿಶ್ವಾಸವನ್ನು ಕಾಪಾಡಿಕೊಂಡು ಸಂಸ್ಥೆ ಗಮನಾರ್ಹ ಸಾಧನೆ ಮಾಡಿದೆ. ಸಮಾಜಮುಖಿ ಚಟುವಟಿಕೆಗಳಲ್ಲೂ ಸಂಸ್ಥೆ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಉಜ್ವಲ್ ಪ್ರಭು ಮಾತನಾಡಿ, “ನಮ್ಮ ಎಲ್ಲಾ ಸಿಬ್ಬಂದಿಗಳ ಪರಿಶ್ರಮ ಮತ್ತು ಗ್ರಾಹಕರ ವಿಶ್ವಾಸವೇ ಈ ಗೌರವಕ್ಕೆ ಕಾರಣ. ಈ ಪ್ರಶಸ್ತಿಯನ್ನು ನಮ್ಮ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಅರ್ಪಿಸುತ್ತೇವೆ” ಎಂದು ಹೇಳಿದರು.ಈ ಪ್ರಶಸ್ತಿ ಮಂಗಳೂರಿನ ಗೃಹ ನಿರ್ಮಾಣ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

















