ಭೂಮಿ ಮತ್ತು ನಮಗೆ ನಾಗನ ಮೂಲಕ ನೇರ ಸಂಪರ್ಕ ಇದೆ ಎಂಬ ಸಂದೇಶವನ್ನು ಯುವಜನತೆಗೆ ತಿಳಿಸುವ ಪ್ರಯತ್ನ ಬನ ಸಿನಿಮಾದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ನಾಗ ಎಂದರೆ ಏನು? ನಮ್ಮ ನೆಲದ ಸಂಸ್ಕೃತಿ ಏನು ಎಂಬುದನ್ನು ಸಿನಿಮಾ ಹೇಳುತ್ತದೆ. ಹುಟ್ಟಿದ ಮಗು ಮತ್ತೆ ತಾಯಿಯ ಮಡಿಲಿಗೆ ಸೇರುವುದು ನಾಗನ ಮೂಲಕವೇ. ಇಂತಹ ಅನೇಕ ದೃಷ್ಟಾಂತಗಳು ನಮ್ಮ ಮುಂದಿವೆ. ಇದರಲ್ಲಿ ಒಂದು ಕಥೆಯನ್ನು ನಮ್ಮ ಮುಂದಿರಿಸಿದ್ದಾರೆ ಬನ ತಂಡ. ಫ್ಯಾಮಿಲಿ ಕುಳಿತುಕೊಂಡ ನೋಡಬಹುದಾದ ಸಿನಿಮಾ ಬನ. ಹಾರ್ಟ್ ಟಚಿಂಗ್ ಕ್ಲೈಮ್ಯಾಕ್ಸ್ ಜೊತೆಗೆ ಸುಂದರವಾಗಿ ಸಿನಿಮಾ ಮೂಡಿಬಂದಿದೆ. ಇಡೀಯ ತಂಡಕ್ಕೆ All the Best.
– ನಿತಿನ್ ಪಕ್ಕಳ, ಪುತ್ತೂರು ಪ್ರಾಪರ್ಟಿಸ್
ಸಸ್ಪೆನ್ಸ್ ಥ್ರಿಲ್ಲರ್, ಮಣ್ಣಿನ ಕಂಪು
ಗಣೇಶ್ ಎನ್. ಕಲ್ಲರ್ಪೆ
ಕರಾವಳಿಯಲ್ಲಿ ನಾಗನಿಗೆ ವಿಶೇಷ ಪ್ರಾತಿನಿಧ್ಯ. ನಾಗನಿಗೆ ಸಂಬಂಧಪಟ್ಟ ಹಲವು ಕಾರಣೀಕ ಕಥೆಗಳನ್ನು ನಾವು ಕೇಳಿರುತ್ತೇವೆ. ಅಂತಹ ಒಂದು ಮೈನವಿರೇಳಿಸುವ, ಸಿನಿಮಾ ಪ್ರಿಯರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಬಲ್ಲ ಕಥೆಯನ್ನಿಟ್ಟುಕೊಂಡು, ರೂಪಿಸಿದ ಸಸ್ಪೆನ್ಸ್ ಸಿನಿಮಾ ಬನ.
ಕರಾವಳಿಯಾದ್ಯಂತ ಬನ ಸಿನಿಮಾ ತೆರೆ ಕಂಡಿದೆ. ಧರ್ಮದೈವ, ಧರ್ಮಚಾವಡಿ ಸಿನಿಮಾದ ನಂತರ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಬನ. ಹೊಸ ಕಲಾವಿದರಿಗೇ ಬಣ್ಣ ಹಚ್ಚಿ, ಎರಡು ಕುಟುಂಬಗಳ ಕಥೆಯನ್ನು ಹೆಣೆದುಕೊಂಡು ಹೋಗುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಿನಿಮಾದಲ್ಲಿ ಒಂದಷ್ಟು ತಾಂತ್ರಿಕ ಶ್ರೀಮಂತಿಕೆಯ ಕೊರತೆ ಇದೆ. ಆದರೆ ಸಿನಿಮಾದ ವೇಗಕ್ಕೆ ಅದೆಲ್ಲಾ ಗೌಣ.
ಬನ ಸಿನಿಮಾದ ಬಗ್ಗೆ ಹೇಳಬೇಕೆಂದರೆ ಅದು ತಾಯಿ – ಮಗಳ ಕಥೆ. ಅಥವಾ ಎರಡು ಕುಟುಂಬದ ಯುವಕ – ಯುವತಿಯ ಪ್ರೇಮಕಥೆ. ಇದರ ಸುತ್ತ ನಾಗ. ನಡುನಡುವೆ ಬಂದು ಹೋಗುವ ನಾಗಿಣಿಯರು, ಕತ್ತಲೆಯ ಝಳಕ್ಕು ಎದೆ ಝಳ್ ಎಂದೆನಿಸುವಂತೆ ಮಾಡುತ್ತದೆ. ಅದರಲ್ಲೂ ತಾಯಿಯಿಂದ ಬೇರ್ಪಟ್ಟ ಮಗಳು ನಾಗಿಣಿಯ ಅವತಾರದಲ್ಲಿ ಕಾಣಿಸಿಕೊಳ್ಳುವಾಗ – ಸಿನಿಮಾ ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತದೆ. ಬಾಲಕಿ ಚಿನ್ನು ಪಾತ್ರದಲ್ಲಿ ನಾಗಿಣಿಯ ಅವತಾರದಲ್ಲಿ ತನ್ಮಯಳಾಗಿ ಅಭಿನಯಿಸಿರುವ ಅಮೃತಾ ಎಂಬ ಪುಟ್ಟ ಬಾಲಕಿ ವಿಸ್ಮಯ ಮೂಡುವಂತೆ ಮಾಡುತ್ತಾಳೆ. ಈ ಪುಟ್ಟ ಬಾಲಕಿ ನಾಗಿಣಿಯಾಗಿ ಕಾಣಿಸಿಕೊಳ್ಳುವುದನ್ನು ನೋಡುವಾಗ – ರವಿ ಬೆಳಗೆರೆಯ ಸರ್ಪ ಸಂಬಂಧ ಕಾದಂಬರಿ ನೆನಪಿಗೆ ಬರುತ್ತದೆ. ಅಷ್ಟು ಮನೋಜ್ಞವಾಗಿ ಮೂಡಿಬಂದಿದೆ.
ಫೈಟ್ ಅಷ್ಟಾಗಿ ಸಿನಿಮಾಕ್ಕೆ ಒಗ್ಗಿಕೊಂಡಿಲ್ಲ ಎಂದೆನಿಸುತ್ತದೆ. ಫೈಟ್ ಸೀನನ್ನೂ ಇನ್ನೂ ಉತ್ತಮವಾಗಿ ಚಿತ್ರೀಕರಿಸಬಹುದಿತ್ತು. ಹಾಡು ಅಷ್ಟಾಗಿ ಮನಸ್ಸಿನಲ್ಲಿ ಉಳಿದುಕೊಳ್ಳುವಂತಿಲ್ಲ. ಆದರೆ ನಾಗರಾಧನೆ ಎಂದರೆ ಅದು ಬನ. ಆಧುನಿಕ ಕಾಂಕ್ರೀಟಿಕರಣವಂತು ಅಲ್ಲವೇ ಅಲ್ಲ. ಸಿನಿಮಾದಲ್ಲೂ ಸಾಂಪ್ರದಾಯಿಕ ನಾಗನ ಬನವೇ ಸಿನಿಮಾದ ಶ್ರೀಮಂತಿಕೆ.
ನಮ ಬೆನ್ಕ ನಮ ತಿನ್ಕ… ಎಂಬ ಕಾಮಿಡಿ ಡೈಲಾಗ್ ಪ್ರೇಕ್ಷಕರನ್ನು ನಗಿಸುತ್ತದೆ. ವಿಪರೀತ ಎಂದೆನಿಸದ ಕಾಮಿಡಿ, ಸಿನಿಮಾಕ್ಕೆ ತಕ್ಕನಷ್ಟೇ ಇದೆ. ಅಂದರೆ ಕಥೆಗೆ ಹೆಚ್ಚಿನ ಆದ್ಯತೆ ಇಲ್ಲಿ ನೀಡಲಾಗಿದೆ.
ಕ್ಲೈಮ್ಯಾಕ್ಸ್ ಬಗ್ಗೆ ಹೇಳಲೇಬೇಕು. ಪ್ರಾರಂಭದಿಂದಲೇ ಪೊಲೀಸ್ ತನಿಖೆಯ ಬಗ್ಗೆ ತಿಳಿಸುತ್ತಾರೆ. ಆದರೆ ಅದೇನು ಎಂದು ತಿಳಿಯುವುದು ಕೊನೆಯಲ್ಲೇ. ಬಾಂಬೆಯಿಂದ ಆಗಮಿಸುವ ಹೆಂಗಸು, ಸಿನಿಮಾದ ಮಗ್ಗುಲನ್ನೇ ಬದಲಿಸಿಬಿಡುತ್ತದೆ. ಅಲ್ಲಿವರೆಗೆ ನಾಗಿಣಿಯರು, ಅಜ್ಞಾತ ಹೆಂಗಸೊಬ್ಬಳು ಕಾಣಿಸಿಕೊಳ್ಳುತ್ತಿದ್ದರೆ, ಬಾಂಬೆಯಿಂದ ಹೆಂಗಸೊಬ್ಬಳು ಆಗಮಿಸುವಾಗ ಬಾಲಕಿ ಚಿನ್ನು ನಾಗಿಣಿಯಾಗುತ್ತಾಳೆ. ಥ್ರಿಲ್ಲರ್ ಸಿನಿಮಾ ಇಷ್ಟಪಡುವವರಿಗೆ, ನಾಗರಾಧನೆಯ ಮಹತ್ವ ಅರಿತವರಿಗೆ, ತುಳು ಸಂಸ್ಕೃತಿಯ ಅರಿವಿದ್ದವರಿಗೆ ಬನ ಸಿನಿಮಾ ಆಪ್ಯಾಯವಾಗುತ್ತದೆ.
ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನಿಸುವ ಸಿನಿಮಾ ಬನ. ಹಾಗಾಗಿಯೇ ಸಿನಿಮಾ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.























