ಕರ್ನಾಟಕದ ಮೂರು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಕಾಂಗ್ರೆಸ್ನ ಸಿಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ. ಅದರೊಂದಿಗೆ, ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಅವರನ್ನು ಮತದಾರರು ‘ಕೈ’ ಹಿಡಿದಿದ್ದಾರೆ.
ಅತ್ತ ನಿಖಿಲ್ಗೆ ಮೂರನೇ ಬಾರಿಯೂ ಮುಖಭಂಗವಾಗಿದೆ. ಈ ಹಿಂದೆ ಮಂಡ್ಯದಿಂದ ಲೋಕಸಭೆ ಚುನಾವಣೆ, ರಾಮನಗರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋಲುಂಡಿದ್ದ ಅವರು, ಇದೀಗ ಮೂರನೇ ಪ್ರಯತ್ನದಲ್ಲಿಯೂ ವಿಫಲರಾಗಿದ್ದಾರೆ.
25,515 ಮತಗಳ ಅಂತರದ ಗೆಲುವು
ಚನ್ನಪಟ್ಟಣ ಉಪಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಯೋಗೇಶ್ವರ್ ಗೆಲುವಿಗೆ ಕಾರಣವೇನು?
ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್ ಕೈ ಹಿಡಿದಿರಬಹುದು. ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಇದೆ. ಯೋಗೇಶ್ವರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿರುವುದರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ಲಸ್ ಆಗುರಬಹುದು. ಜೊತೆ ಡಿಕೆ ಸಹೋದರರು ಯೋಗೇಶ್ವರ್ ಬೆನ್ನಿಗೆ ನಿಂತಿರುವುದು ಕೂಡ ನೆರವಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟು ಪ್ರದರ್ಶನ ಸೇರಿ ಹಲವು ವಿಚಾರಗಳು ಸಿಪಿವೈಗೆ ವರವಾಗಿ ಪರಿಣಮಿಸಿದವು.
ಮತ್ತೆ ಅದೃಷ್ಟ ಪರೀಕ್ಷೆಯಲ್ಲಿ ಸೋತ ನಿಖಿಲ್:
ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದರೂ, ಚನ್ನಪಟ್ಟಣದಲ್ಲಿ ಈ ಬಾರಿ ಜಿದ್ದಾಜಿದ್ದಿ ಜೋರಾಗಿತ್ತು. 2018ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋಲು. 2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸೋಲು. ಹೀಗೆ ಎರಡು ಸೋಲು ಕಂಡಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಈಬಾರಿ ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅತ್ತ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಸಿಪಿ ಯೋಗೇಶ್ವರ್ಗೆ ಕೂಡಾ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿತ್ತು. ನಿಖಿಲ್, ಯೋಗೇಶ್ವರ್ ಅಭ್ಯರ್ಥಿಯಾದರೂ, ಇದು ಹೆಚ್ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಯುದ್ಧವೇ ಆಗಿತ್ತು.
ನಿಖಿಲ್ಗೆ ಹಿನ್ನಡೆಯಾದ ಅಂಶಗಳೇನು?
ನಿಖಿಲ್ಗೆ ಮೈನಸ್ ಆಗಿರುವ ಮೊದಲನೇ ಪಾಯಿಂಟ್ ಅಂದರೆ ಕುಟುಂಬ ರಾಜಕಾರಣ ಮತ್ತು ಕೊನೇ ಕ್ಷಣದಲ್ಲಿ ಸ್ಪರ್ಧೆ ಮಾಡಿರುವುದು. ಅಲ್ಲದೆ, ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಂಡ್ಯ ಸಂಸದ ಸ್ಥಾನಕ್ಕೆ ಹೋಗಿರುವ ಅಂಶ ಕೂಡಾ ಮುಖ್ಯವಾಯಿತು. ಇನ್ನು ಯೋಗೇಶ್ವರ್ಗೆ ಟಿಕೆಟ್ ಕೊಡಲಿಲ್ಲ ಎಂಬ ಅನುಕಂಪ ನಿಖಿಲ್ಗೆ ಮೈನಸ್ ಆಯಿತು ಎಂದೂ ಹೇಳಲಾಗುತ್ತಿದೆ. ಜೊತೆಗೆ ತಳ ಮಟ್ಟದಲ್ಲಿ ಬಿಜೆಪಿಯಿಂದ ಅಷ್ಟಾಗಿ ಸಹಕಾರ ಸಿಗದೇ ಹೋಗಿರುವ ಸಾಧ್ಯತೆಯೂ ಇದೆ. ಅಂತಿಮವಾಗಿ ಅವರದ್ದೇ ಕುಟುಂಬದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಕೇಸ್ ವಿಚಾರವೂ ನಿಖಿಲ್ಗೆ ಮೈನಸ್ ಆಗಿರಬಹುದು ಎನ್ನಲಾಗುತ್ತಿದೆ.