ಪ್ರಚಲಿತ

ಪುತ್ತೂರು ಶಾಪಿಂಗ್ ಹಬ್ಬದ ಮೆಗಾ ಡ್ರಾ – ಕುಟುಂಬ ಸಮ್ಮಿಲನ | ಆಲ್ಟೋ ಕೆ10 ಕಾರು, ಬೈಕ್, ಆ್ಯಂಡ್ರಾಯಿಡ್ ಟಿ.ವಿ, ರೆಫ್ರಿಜರೇಟರ್, ಇಂಡಕ್ಷನ್ ಕುಕ್ಕರ್, ಐರನ್ ಬಾಕ್ಸ್ ಗೆದ್ದ ಗ್ರಾಹಕರು

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿನ ಗ್ರಾಹಕರನ್ನು ಪುತ್ತೂರಿನಲ್ಲೇ ಉಳಿಸಿಕೊಳ್ಳುವ ಯೋಜನೆಯಾಗಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಹಮ್ಮಿಕೊಂಡಿರುವ `ಪುತ್ತೂರು ಶಾಪಿಂಗ್ ಹಬ್ಬ’ದ ಮೆಗಾ ಡ್ರಾ ಮಾ. 29ರಂದು ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಂಜೆ ವಿಜ್ರಂಭಣೆಯಿಂದ ನೆರವೇರಿತು.

chennai-shopping
maithri

ಮಂಗಳೂರು ಕೆನರಾ ಛೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಅಧ್ಯಕ್ಷ ಪಿ.ಬಿ ಅಹಮದ್ ಮುದಸ್ಸರ್ ಮಾತನಾಡಿ, ಪ್ರಸ್ತುತ ವಿದ್ಯಾಮಾನದಲ್ಲಿ ವರ್ತಕರಲ್ಲಿ ಬಹಳಷ್ಟು ಸವಾಲುಗಳಿವೆ. ಪುತ್ತೂರು ವರ್ತಕರ ಸಂಘವು ವರ್ತಕರ ಹಾಗೂ ಸಮಾಜದ ಏಳಿಗೆಗೋಸ್ಕರ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಮಂಗಳೂರಿನಂತೆ ದೊಡ್ಡ ನಗರ ಪುತ್ತೂರು ಅಲ್ಲದಿದ್ದರೂ ಪುತ್ತೂರು ವರ್ತಕರ ಸಂಘದ ಸದಸ್ಯರಲ್ಲಿ ಒಗ್ಗಟ್ಟು ಮೇಳೈಸಿದೆ. ಇಂದಿನ ಆಧುನಿಕ ಯುಗದಲ್ಲಿ ಅನೇಕ ಸ್ಪರ್ಧೆಗಳನ್ನು ವರ್ತಕರು ಎದುರಿಸಬೇಕಾಗುತ್ತದೆ. ವರ್ತಕರ ಕುಟುಂಬದ ಸದಸ್ಯರಿಗೆ ಏರ್ಪಡಿಸಿದ ಇಂತಹ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿದೆ ಎಂದರು.

ಜಿ.ಎಲ್ ಆಚಾರ್ಯ ಸಂಸ್ಥೆಯ ಮುಖ್ಯಸ್ಥ ಬಲರಾಮ ಆಚಾರ್ಯ ಮಾತನಾಡಿ, ವ್ಯವಹಾರ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗಲಿದೆ. ಆನ್‌ಲೈನ್, ಕಾರ್ಪೋರೇಟ್ ಸೆಕ್ಟರ್‌ನಿಂದ ಸ್ಥಳೀಯ ವರ್ತಕರಿಗೆ ಪೆಟ್ಟು ಬೀಳುವಂತಾಗಿದೆ. ಪ್ರತಿ ವ್ಯವಹಾರದಲ್ಲಿ ಫ್ರಂಟ್ ಎಂಡ್ ಮತ್ತು ಬ್ಯಾಕ್ ಎಂಡ್ ಇದೆ. ಈ ಶಾಪಿಂಗ್ ಹಬ್ಬದ ಯೋಜನೆಯಿಂದಾಗಿ ಚಿಲ್ಲರೆ ವ್ಯಾಪಾರಸ್ಥರಿಗೂ ಬಹಳ ಅನುಕೂಲವಾಗಿದ್ದು ವರದಾನ ಎಂಬಂತಿದೆ. ಪುತ್ತೂರು ವರ್ತಕ ಸಂಘ ಮಾದರಿ ಸಂಸ್ಥೆಯಾಗಿ ಬೆಳೆದಿರುವುದು ಶ್ಲಾಘನೀಯ ಎಂದರು.

ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರಿಸ್ ಮಾಲಕ ಗಿಲ್ಬರ್ಟ್ ಡಿ’ಸೋಜ ಮಾತನಾಡಿ, ಪ್ರಸ್ತುತ ಆನ್‌ಲೈನ್ ಖರೀದಿಯ ಭರಾಟೆಯ ಎದುರು ವರ್ತಕರು ಸೆಟೆದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಸಂಘವನ್ನು ಹಿರಿಯರು ಕಟ್ಟಿ ಬೆಳೆಸಿ, ಬೆಳಗಿಸಲು ಕಾರಣಕರ್ತರಾಗಿದ್ದಾರೆ. ಒಳ್ಳೆಯ ಮನಸ್ಸು ಇದ್ದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇರಿಕೊಳ್ಳುತ್ತಾರೆ. ಆನ್‌ಲೈನ್ ಖರೀದಿಗೆ ಯಾರೂ ಮನಸ್ಸು ಮಾಡದೆ ಸ್ಥಳೀಯ ವರ್ತಕರನ್ನು ಪ್ರೋತ್ಸಾಹಿಸಿ. ವರ್ತಕರಲ್ಲಿ ಒಳ್ಳೆಯ ರೀತಿಯ ಆರೋಗ್ಯಕರ ಸಂಬಂಧವಿದ್ದಾಗ ಸಂಘವು ಉಳಿಯಬಲ್ಲುದು ಎಂದ ಅವರು ಇಡೀ ವಿಶ್ವವೇ ಒಗ್ಗಟ್ಟಾಗಿ ಇದ್ದರೆ ಯುದ್ಧಗಳು ಆಗುವುದಿಲ್ಲ. ಎಲ್ಲಾ ದೇಶಗಳು ವೀಸಾ ಪರಂಪರೆಯನ್ನು ನಿಲ್ಲಿಸಬೇಕು ಮತ್ತು ಪ್ರತೀ ದೇಶದ ನಾಗರಿಕನಿಗೆ ಎಲ್ಲಾ ದೇಶಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವಂತಾದಾಗ ನಮ್ಮಲ್ಲಿನ ಗೆಳೆತನ ವೃದ್ಧಿಗೊಳ್ಳುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಮಾತನಾಡಿ, ವರ್ತಕರ ಒಳಿತಿಗಾಗಿ ಬೇಕಾಗಿ ಸಾಕಷ್ಟು ಹೋರಾಟ ಸಂಘವು ಮಾಡಿಕೊಂಡು ಬಂದಿದೆ. ಪುತ್ತೂರಿನಲ್ಲಿ ದೊಡ್ಡ ಮಟ್ಟದ ವ್ಯಾಪಾರಸ್ಥರು ಕಡಿಮೆ ಸಂಖ್ಯೆಯಲ್ಲಿದ್ದು ಅವರುಗಳು ಗ್ರಾಹಕರನ್ನು ಆಕರ್ಷಿಸಲು ಹಲವು ಹಬ್ಬಗಳನ್ನು ಮಾಡುತ್ತಾರೆ. ಆದರೆ ಸಣ್ಣ ಮಟ್ಟದ ವ್ಯಾಪಾರಸ್ಥರಿಗೆ ತಮ್ಮ ವ್ಯಾಪಾರವನ್ನು ಹೆಚ್ಚಿಸಲು, ಗ್ರಾಹಕರನ್ನು ಆಕರ್ಷಿಸಲು ಹಬ್ಬಗಳನ್ನು ಆಚರಿಸಲು ಆಗುವುದಿಲ್ಲ. ಆದ್ದರಿಂದ ವರ್ತಕರನ್ನು ಸಕ್ರಿಯಗೊಳಿಸಲು, ಒಟ್ಟಿಗೆ ಸೇರಿಸಲು, ವ್ಯಾಪಾರವನ್ನು ವೃದ್ಧಿಗೊಳಿಸಲು ಶಾಪಿಂಗ್ ಹಬ್ಬ ಅನ್ನುವುದು ಸಣ್ಣ ಪ್ರಯತ್ನವಾಗಿದೆ ಎಂದ ಅವರು ನಮ್ಮ ಶಾಪಿಂಗ್ ಹಬ್ಬ 70 ಸಾವಿರ ಗ್ರಾಹಕರಿಗೆ ರೀಚ್ ಆಗಿದೆ, 125 ಅಂಗಡಿ ಮಾಲಕರು ಸಹಕಾರ ನೀಡಿರುತ್ತಾರೆ. ಗ್ರಾಹಕರಿಗೆ ಒಂದು ರೂಪಾಯಿ ಹೊರೆ ಬೀಳದೆ ವಿಜೇತರಾಗುವ ಅವಕಾಶ ಈ ಶಾಪಿಂಗ್ ಹಬ್ಬದಲ್ಲಿದೆ. ಮುಂದಿನ ದಿನಗಳಲ್ಲಿ ವರ್ತಕರಿಗೋಸ್ಕರ, ವರ್ತಕರ ಕುಟುಂಬಕ್ಕೋಸ್ಕರ ಕೆಲವೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ಅವರು ಹೇಳಿದರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ ಮಾತನಾಡಿ, ಕಳೆದ 45 ವರ್ಷಗಳಿಂದ ಸಂಘವು ವರ್ತಕರ ಉತ್ತಮ ಒಡನಾಟದಿಂದ ಮುನ್ನೆಡೆಯುತ್ತಾ ಬಂದಿದೆ. ರೂ. 10 ಲಕ್ಷ ವೆಚ್ಚದ ಈ ಶಾಪಿಂಗ್ ಹಬ್ಬದ ಬಗ್ಗೆ ಭಯ ಇತ್ತು. ವರ್ತಕರನ್ನು ಭೇಟಿ ಮಾಡಿದ ಮೇಲೆ ಶಾಪಿಂಗ್ ಹಬ್ಬಕ್ಕೆ ಬೇಡಿಕೆ ಬಂದಿದೆ. ಆನ್‌ಲೈನ್ ವ್ಯಾಪಾರದಿಂದ ವರ್ತಕರಿಗೆ ನಿಜವಾದ ಸಮಸ್ಯೆ ಉಂಟಾಗಿದ್ದು ಇಂತಹ ಕಾರ್ಯಕ್ರಮ ಮಾಡಲು ವರ್ತಕರ ಬೇಡಿಕೆ ಇದೆ. ಈ ಶಾಪಿಂಗ್ ಹಬ್ಬದ ಮೂಲಕ ಖರ್ಚು ಹೋಗಿ ಉಳಿದ ಹಣವನ್ನು ಸಂಘದ ಸ್ವಂತ ಕಟ್ಟಡಕ್ಕೆ ಡೆಫಾಸಿಟ್ ಮಾಡಲಿದ್ದೇವೆ ಎಂದರು.

ಗೌರವಾರ್ಪಣೆ

ಮಂಗಳೂರು ಕೆನರಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಅಧ್ಯಕ್ಷ ಪಿ.ಬಿ ಅಹಮದ್ ಮುದಸ್ಸರ್, ಜಿ.ಎಲ್ ಆಚಾರ್ಯ ಸಂಸ್ಥೆಯ ಬಲರಾಮ ಆಚಾರ್ಯ, ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರಿಸ್ ಮಾಲಕ ಗಿಲ್ಬರ್ಟ್ ಡಿ’ಸೋಜ, ಶಾಪಿಂಗ್ ಹಬ್ಬದ ಕಾನ್ಸೆಪ್ಟ್ ರೂವಾರಿ ಶಾಪಿಂಗ್ ಹಬ್ಬದ ಸಂಯೋಜಕ ಶಶಿರಾಜ್ ರೈ, ಶಾಪಿಂಗ್ ಹಬ್ಬದ ಆರಂಭದಿಂದ ಇಂದಿನವರೆಗೂ ಪ್ರತಿ ಹಂತದಲ್ಲಿ ಕೈಜೋಡಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ ಅವರಿಗೆ ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.

ಸ್ಮರಣಿಕೆ ಗೌರವ:

ಸುಮಾರು ರೂ. 10 ಲಕ್ಷ ಯೋಜನೆಯ ಈ ಶಾಪಿಂಗ್ ಹಬ್ಬ ಯೋಜನೆಗೆ ಎಲ್ಲರೂ ಕೈಜೋಡಿಸಿದ್ದು, ಇದರಲ್ಲಿ ಮೆಗಾ ಪ್ರಾಯೋಜಕರಾಗಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದೊಂದಿಗೆ ಕೈಜೋಡಿಸಿರುವ ಮುಳಿಯ ಕೇಶವ ಭಟ್ ಮತ್ತು ಸನ್ಸ್, ಜಿ.ಎಲ್ ಆಚಾರ್ಯ ಸಂಸ್, ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಮುಖ್ಯಸ್ಥರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮಾಜಿ ಅಧ್ಯಕ್ಷರುಗಳಿಗೆ ಗೌರವ:

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪೂರ್ವಾಧ್ಯಕ್ಷರಾದ ಕೇಶವ ಪೈ, ಜೋನ್ ಕುಟಿನ್ಹಾ, ವಾಮನ್ ಪೈ, ಸುರೇಂದ್ರ ಕಿಣಿ, ಸಿಡ್ಕೋ ಅಧ್ಯಕ್ಷ ಟಿ.ವಿ ರವೀಂದ್ರನ್, ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಅವರಿಗೆ ಹೂ ನೀಡಿ ಗೌರವಿಸಲಾಯಿತು.

ಡಾ. ಅನುಪಮಾ ಪ್ರಾರ್ಥಿಸಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ವಾಮನ್ ಪೈ ಅತಿಥಿಗಳ ಪರಿಚಯ ಮಾಡಿದರು. ಮಾಜಿ ಅಧ್ಯಕ್ಷ ಜೋನ್ ಕುಟಿನ್ಹಾ ವಂದಿಸಿದರು. ಡಾ. ರಾಜೇಶ್ವರಿ ಹಾಗೂ ಪ್ರೊ| ನೀಮಾ ಕಾರ್ಯಕ್ರಮ ನಿರೂಪಿಸಿದರು.

ಮೆಗಾ ಡ್ರಾ

ಪುತ್ತೂರು ಶಾಪಿಂಗ್ ಹಬ್ಬದ ಮೆಗಾ ಡ್ರಾದಲ್ಲಿ 37664 ನಂಬರಿಗೆ ಆಲ್ಟೊ ಕೆ10 ಕಾರು ಬಂಪರ್ ಬಹುಮಾನವಾಗಿ ಲಭಿಸಿದೆ. ಶಾಪಿಂಗ್ ಹಬ್ಬದ ಕೂಪನ್ ವಿತರಿಸಿದ 125 ಅಂಗಡಿ ವರ್ತಕರಿಗೆ ಏರ್ಪಡಿಸಿದ ಡ್ರಾದಲ್ಲಿ 022 ನಂಬರಿಗೆ ಬೈಕ್, ಗ್ರಾಹಕರಿಗೆ ಏರ್ಪಡಿಸಿದ ಡ್ರಾದಲ್ಲಿ 54668 ನಂಬರಿಗೆ ಬೈಕ್ ಬಹುಮಾನವಾಗಿ ಲಭಿಸಿರುತ್ತದೆ. ಉಳಿದಂತೆ ಪುತ್ತೂರು ಶಾಪಿಂಗ್ ಹಬ್ಬದಲ್ಲಿ ಭಾಗವಹಿಸಿದವರಿಗೆ ಸಮಾಧಾನಕರವಾಗಿ ಆ್ಯಂಡ್ರಾಯಿಡ್ ಟಿ.ವಿ, ರೆಫ್ರಿಜರೇಟರ್, ಇಂಡಕ್ಷನ್ ಕುಕ್ಕರ್, ಐರನ್ ಬಾಕ್ಸ್ ಲಭಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಲಕ್ಕಿ ಡ್ರಾ ಆಯೋಜಿಸಲಾಗಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts