ಪುತ್ತೂರು: ಸಂಪ್ಯದಿಂದ ದೇವಸ್ಯ – ಒಳತ್ತಡ್ಕಕ್ಕೆ ಸಮೀಪದಿಂದ ಸಂಪರ್ಕಿಸುವ ಬಳಸು ದಾರಿ ಸಂಪ್ಯ – ಕೋಟ್ಲಾರ್ – ಒಳತ್ತಡ್ಕ ರಸ್ತೆ. ಹಾಗೆಂದು ಮಳೆ ಶುರುವಾದ ಈ ದಿನದಲ್ಲಿ ನೀವಲ್ಲಿಂದ ಪ್ರಯಾಣಿಸಿದರೆ, ಆಡಳಿತಕ್ಕೊಂದು ಹಿಡಿಶಾಪ ಗ್ಯಾರೆಂಟಿ.

ಕೆಟ್ಟು ಹೋದ ರಸ್ತೆಯನ್ನು ಎಷ್ಟು ನಿಕೃಷ್ಟವಾಗಿ ಬೈಯ್ಯಬಹುದೋ ಅಷ್ಟರಮಟ್ಟಿಗೆ ಬೈಯ್ಯಬಹುದಾದ ಎಲ್ಲಾ ಅರ್ಹತೆಗಳನ್ನು ಸಂಪಾದಿಸಿಕೊಂಡ ಹಿರಿಮೆ ಇದೀಗ ಆ ರಸ್ತೆಗಿದೆ.
ದಿನನಿತ್ಯ ನೂರಾರು ಸಾರ್ವಜನಿಕರು, ನೂರಾರು ವಾಹನಗಳು ಪ್ರಯಾಣಿಸುವ ರಸ್ತೆಯಿದು. ಈ ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಮನೆಗಳನ್ನು ಕಾಣಬಹುದು. ಇವರಿಗೆಲ್ಲ ಊ ರಸ್ತೆ ತೀರಾ ಅತ್ಯಾವಶ್ಯಕ ಸಂಪರ್ಕ ಕೊಂಡಿ. ಇಂತಿಪ್ಪ ರಸ್ತೆ ಇಂದು ತೀರಾ ಹದಗೆಟ್ಟು ಹೋಗಿದೆ. ಕೋಟ್ಲಾರ್ ಎಂಬಲ್ಲಿ ಕೆಟ್ಟು ಹೋದ ರಸ್ತೆಗೆ ಮಣ್ಣು ಸುರಿದ ಪರಿಣಾಮ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಕೆಟ್ಟ ರಸ್ತೆಗೆ ಕೆಂಪು ಮಣ್ಣು – ಅದರ ಮೇಲೆ ಸುರಿಯುವ ಮಳೆ. ಪಾದಚಾರಿ, ವಾಹನ ಸವಾರರ ಪಾಡು ಹೇಗಿರಬೇಡ… ನೀವೇ ಊಹಿಸಿಕೊಳ್ಳಿ. ದ್ವಿಚಕ್ರ ಸವಾರರ ಸರ್ಕಸ್, ಜಾರಿಕೊಂಡು ತೆವಳುವ ಕಾರು, ಕೆಸರುಗದ್ದೆಗಿಳಿದ ಪಾಡು ಪಡುವ ಪಾದಾಚಾರಿಗಳು… ಹೀಗೇ ಒಬ್ಬೊಬ್ಬರ ಪಾಡು ಒಂದೊಂದು ರೀತಿ. ಎಲ್ಲರೂ ಆಡಳಿತಕ್ಕೊಂದು ಶಾಪ ಹಾಕುವವರೇ. ಆದರೆ ಯಾರಲ್ಲಿ ಹೇಳುವುದು?
ಅಂದ ಹಾಗೇ, ಈ ರಸ್ತೆ ಆರ್ಯಾಪು ಗ್ರಾಮದಲ್ಲಿದೆ. ಜಿಲ್ಲಾ ಪಂಚಾಯತ್ ಆಡಳಿತಕ್ಕೆ ಒಳಪಟ್ಟಿದೆ.
ಸಂಪ್ಯ – ಒಳತ್ತಡ್ಕ ರಸ್ತೆಯ ಒಂದು ತುದಿ ಮಾಣಿ – ಮೈಸೂರು ಹೆದ್ದಾರಿ. ಇನ್ನೊಂದು ತುದಿ ಕಾಣಿಯೂರು – ಮಂಜೇಶ್ವರ ಹೆದ್ದಾರಿ. ಇವೆರಡು ಹೆದ್ದಾರಿಗಳನ್ನು ಹಿಡಿದಿಟ್ಟ ಜಿ.ಪಂ. ರಸ್ತೆಯಿದು.