ಕೃಷಿ

ಜ. 10 – 12: ಪುತ್ತೂರಿನಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಹಾಗೂ ಸಸ್ಯ ಜಾತ್ರೆ ಜ. 10ರಿಂದ 12ರತನಕ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ಕೃಷಿಕ ಸಮಾಜ ಮತ್ತು ಕೃಷಿ ಮೇಳದ ಅಧ್ಯಕ್ಷ ವಿಜಯ ಕುಮಾರ್ ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗದ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಲಾಗುತ್ತಿದೆ. ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಕೇಂದ್ರ, ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದಲ್ಲಿ ಕೃಷಿ ಮೇಳ ಮತ್ತು ಸಸ್ಯ ಜಾತ್ರೆ ನಡೆಯಲಿದ್ದು, ಸುಮಾರು 200ಕ್ಕೂ ಮಿಕ್ಕಿ ಕೃಷಿ, ಇನ್ನಿತರ ಚಟುವಟಿಕೆಗಳ ಪ್ರದರ್ಶನ ಮತ್ತು ವ್ಯಾಪಾರ ಮಳಿಗೆಗಳ ಸ್ಟಾಲ್‌ಗಳು ಇರಲಿದೆ, ಮೇಳದಲ್ಲಿ ಮಾಹಿತಿ ಗೋಷ್ಠಿಗಳು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಸುಮಾರು 2 ಲಕ್ಷಕ್ಕೂ ಮಿಕ್ಕಿ ಕೃಷಿಕರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.

ಅವರು ಜ. 10ರಂದು ಬೆಳಗ್ಗೆ ಗಂಟೆ 10ಕ್ಕೆ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಕೃಷಿ ಸಚಿವರು ಮತ್ತು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ಚೆಲುವರಾಯ ಸ್ವಾಮಿ ಅವರು ಕೃಷಿಮೇಳ ಮತ್ತು ಸಸ್ಯ ಜಾತ್ರೆಯನ್ನು ಉದ್ಘಾಟಿಸಲಿದ್ದಾರೆ. ದ. ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ನಗರದ ಮಹದೇವಪ್ಪ ಅವರು ಕೃಷಿ ಧ್ವಜಾರೋಹಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ರಾಜ್ಯ ಸಭಾ ಸದಸ್ಯ ಡಾ. ಡಿ.ವಿರೇಂದ್ರ ಹೆಗಡೆ, ಸಹಿತ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಅತ್ಯುತ್ತಮ ಕೃಷಿ ಸಾಧಕರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ, ಕೃಷಿ ಸಲಕರಣೆ ಉದ್ಯಮಿಗಳಿಗೆ ಪುರಸ್ಕಾರ

ವಿವಿಧ ತಾಲೂಕುಗಳಿಂದ ಆಯ್ಕೆ ಮಾಡಿದ ಅತ್ಯುತ್ತಮ ಕೃಷಿ ಸಾಧಕರನ್ನು ಸನ್ಮಾನಿಸಲಾಗುವುದು. ಪುತ್ತೂರು ತಾಲೂಕಿಗೆ ಸಂಬಂಧಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬಂಟ್ವಾಳ ತಾಲೂಕಿನ ಕೆ.ಪ್ರೇಮನಾಥ ಶೆಟ್ಟಿ ಕೊರ್ಯ ಬಾಳ್ತಿಲ, ಉಳ್ಳಾಲ ತಾಲೂಕಿನ ಜಿ.ಟಿ.ರಾಜಾರಾಮ ಭಟ್, ಬೆಳ್ತಂಗಡಿ ತಾಲೂಕಿನ ಕಾಂತಪ್ಪ ಪೂಜಾರಿ, ಕಡಬ ತಾಲೂಕಿನ ಅರವಿಂದ ಮುಳ್ಳಂಕೊಚ್ಚಿ, ಸುಳ್ಯ ತಾಲೂಕಿನ ಡಿ.ಎನ್. ಚಂದ್ರಶೇಖರ, ಮಂಗಳೂರು ತಾಲೂಕಿನ ಪ್ರತಿಭಾ ಹೆಗ್ಡೆ, ಮುಲ್ಕಿ ತಾಲೂಕಿನ ಪ್ರಮೀಳಾ ಎನ್. ಶೆಟ್ಟಿ, ಮೂಡಬಿದ್ರೆ ತಾಲೂಕಿನ ನಾಗಪ್ಪ ಪೂಜಾರಿಯವರನ್ನು, ಅತ್ಯುತ್ತಮ ಕೃಷಿ ಕೂಲಿ ಕಾರ್ಮಿಕ ಪುರಸ್ಕಾರವಾಗಿ ಬಂಟ್ವಾಳ ತಾಲೂಕಿನ ವೆಂಕಪ್ಪ ಬಿ. ಗೋಳ್ತಮಜಲು, ಬೆಳ್ತಂಗಡಿ ತಾಲೂಕಿನ ಲಿಂಗಪ್ಪ ಮಡಿವಾಳ, ಪುತ್ತೂರು ತಾಲೂಕಿನ ಮೋಹನ್‌ದಾಸ್ ಕಾಮತ್, ಕಡಬ ತಾಲೂಕಿನ ಶೀನಪ್ಪ ಪೂಜಾರಿ ಹೊಸಮಠ, ಸುಳ್ಯ ತಾಲೂಕಿನ ತೀರ್ಥರಾಮ ಬೈತ್ತಡ್ಕ ಹಾಗು ಕೃಷಿ ಸಲಕರಣೆ ಉತ್ಪಾದಕ ಉದ್ಯಮಿ ಪುರಸ್ಕಾರದಲ್ಲಿ ಕೇಶವ ಗೌಡ ಅಮೈಗುತ್ತು, ಕೆ.ಪಿ.ಮಹಮ್ಮದ್ ಸಾದಿಕ್, ಪುರುಷೋತ್ತಮ ಬಿ.ಎಸ್. ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭ ಜಿಲ್ಲಾ ಕೃಷಿಕ ಸಮಾಜದ ಹಿರಿಯ ಪದಾಧಿಕಾರಿಗಳಾದ ಸಂಪತ್ ಸಾಮ್ರಾಜ್ಯ, ಪಿ.ಕೆ.ರಾಜುಪೂಜಾರಿ, ಪದ್ಮರಾಜ್ ಬಲ್ಲಾಳ್, ಕೆ.ಕೃಷ್ಣರಾಜ್ ಹೆಗಡೆ ಅವರನ್ನು ಗೌರವಿಸಲಾಗುವುದು ಎಂದು ವಿಜಯ ಕುಮಾರ್ ರೈ ಹೇಳಿದರು.

ಗೋಷ್ಠಿಗಳು:

ಜ. 10ರಂದು ಮೇಳದಲ್ಲಿ ಮಧ್ಯಾಹ್ನ 2.30ರಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮಾಹಿತಿ ಗೋಷ್ಠಿಯಲ್ಲಿ ಗೇರುಕೃಷಿ ತಾಂತ್ರಿಕತೆಗಳ ಕುರಿತು ಡಿ.ಸಿ.ಆರ್. ವಿಜ್ಞಾನಿ ಮತ್ತು ಪ್ರಶಸ್ತಿ ಪುರಸ್ಕೃತ ಗೇರುಕೃಷಿಕ ಕಡಮಜಲು ಸುಭಾಷ್ ರೈ ಅವರು ಮಾಹಿತಿ ನೀಡಲಿದ್ದಾರೆ.

ಜ. 11ರಂದು ಬೆಳಗ್ಗೆ ಗಂಟೆ 10ರಿಂದ ಅಡಿಕೆ ಮತ್ತು ಕಾಳುಮೆಣಸಿನ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳು ಮತ್ತು ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಸಿಪಿಸಿಆರ್‌ಐ ವಿಟ್ಲದ ವಿಜ್ಞಾನಿಗಳು, ಕಾಳುಮೆಣಸು ಕೃಷಿಗೆ ಸಾಧಕ ಸುರೇಶ್ ಭಟ್ ಬಲ್ನಾಡು, ಪಲ್ಲತ್ತಡ್ಕ ಅನಂತರಾಮ ಕೃಷ್ಣ, ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ ಗಂಟೆ 2.30ರಿಂದ ಕಾಫಿ, ಹಣ್ಣು ಹಾಗೂ ಇನ್ನಿತರ ಪರ್ಯಾಯ ಬೆಳೆಗಳ ಕುರಿತು ಚಟ್ಟಳ್ಳಿ ಕಾಫಿಬೋರ್ಡ್ನನ ವಿಜ್ಞಾನಿಗಳು, ಕಾಫಿ ಬೆಳೆ, ಕಾಳುಮೆಣಸು ಕೃಷಿಗೆ ಅಜಿತ್ ಪ್ರಸಾದ್ ರೈ, ಚಂದ್ರಶೇಖರ ತಾಳ್ತಜೆ, ಹಣ್ಣಿನ ಬೆಳೆಗಳ ಕೃಷಿಕ ಕೆ.ಪಿ.ಮಹಮ್ಮದ್ ಸಾದಿಕ್ ಅವರು ಮಾಹಿತಿ ನೀಡಲಿದ್ದಾರೆ.

ಜ. 12ರಂದು ಬೆಳಗ್ಗೆ ಗಂಟೆ 10ರಿಂದ ಭತ್ತದ ಕೃಷಿ ಮತ್ತು ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಂಗಳೂರು ರೆವಿಕೆ ವಿಜ್ಞಾನಿಗಳು, ಸಾವಯವ ಭತ್ತದ ಕೃಷಿಕ ಎ.ಪಿ.ಸದಾಶಿವ ಮರಿಕೆ ಸಂಪನ್ಮೂಲ ವ್ಯತ್ತಿಗಳಾಗಿ ಭಾಗವಹಿಸಲಿದ್ದಾರೆ. ಮೂರೂ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

ಜ. 12ರಂದು ಸಮಾರೋಪ

ಜ. 12ರಂದು ಮಧ್ಯಾಹ್ನ ಗಂಟೆ 2.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ರಮಾನಾಥ ರೈ, ಆಳ್ವಾಸ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕೆ.ಎಂ.ಎಫ್. ನಿರ್ದೇಶಕ ಎಸ್.ಬಿ.ಜಯರಾಮ ರೈ ಸಹಿತ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿವಿಧ ಪ್ರದರ್ಶನಗಳು, ಸ್ಪರ್ಧೆಗಳು:

ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯಲ್ಲಿ ಕೃಷಿಗೆ ಸಂಬಂಧಿಸಿದ ಹಲವು ಪ್ರದರ್ಶನಗಳು ಇವೆ. ಸುಮಾರು 40 ಮಳಿಗೆಗಳಲ್ಲಿ ವಿವಿಧ ಇಲಾಖೆಗಳ ಮಾಹಿತಿ ಪ್ರದರ್ಶನಗಳು ಇರಲಿದೆ. ಜಾನುವಾರು ಪ್ರದರ್ಶನ ನಡೆಯಲಿದೆ. ಯಂತ್ರೋಪಕರಣ, ಸಸಿಗಳ ವಿವಿಧ ತಳಿಯ ಬೀಜಗಳು, ರಸಗೊಬ್ಬರಗಳ ಮಳಿಗೆಗಳಿರಲಿವೆ. ಮಡಿಕೆ ತಯಾರಿಕೆ, ಬೆಲ್ಲ ತಯಾರಿ, ಕೃಷಿ ಉಪಕರಣಕ್ಕೆ ಬೇಕಾದ ಕತ್ತಿ ತಯಾರಿಕೆಯ ಪ್ರಾತ್ಯಕ್ಷಿಕೆ ಸಹಿತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ಆರಂಭದ ದಿನ ಚಿತ್ರಕಲಾ ಸ್ಪರ್ಧೆಗಳು ನಡೆಯಲಿದೆ. ಅದೇ ರೀತಿ ಹಾಲು ಕರೆಯುವ ಸ್ಪರ್ಧೆಗಳು ನಡೆಯಲಿದೆ ಎಂದು ದ.ಕ.ಜಿಲ್ಲಾ ಕೃಷಿಕ ಸಮಾಜ ಮತ್ತು ಕೃಷಿಮೇಳದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕಡೆಂಜಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಚಂದ್ರ ಕೋಲ್ಚಾರ್, ಕೋಶಾಧಿಕಾರಿ ಕುಸುಮಾಧರ ಎ.ಟಿ, ಜಿಲ್ಲಾ ನಿರ್ದೇಶಕ ಮಹೇಶ್ ಕೆ. ಸವಣೂರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ | ಫಲಾನುಭವಿ ರೈತರು ಯೋಜನೆ ಪಡೆದುಕೊಳ್ಳಲು ಅಗತ್ಯ ಮಾಹಿತಿ ಇಲ್ಲಿದೆ…

ಕೇಂದ್ರ ಸರ್ಕಾರ ರೈತರಿಗಾಗಿ 2019 ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್…

ಅಡಿಕೆ ಸಾರದಲ್ಲಿದೆ ಕ್ಯಾನ್ಸರ್ ಪ್ರತಿಬಂಧಕ ಗುಣ | ಯೆನೆಪೋಯ ವಿವಿ ವೈಜ್ಞಾನಿಕ ಸಂಶೋಧನೆಗೆ ಕ್ಯಾಂಪ್ಕೋ ಅಭಿನಂದನೆ

ಮಂಗಳೂರು: ಒಂದೆಡೆ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಚರ್ಚೆ ನಡೆಯುತ್ತಿದ್ದರೆ, ಇದೆಲ್ಲಾ…

ರಬ್ಬರ್ ಮೌಲ್ಯವರ್ಧನೆಗಾಗಿ ಸ್ಥಳೀಯ ಕೈಗಾರಿಕೆ | ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ

ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಅಧ್ಯಯನ ಮಾಡಿಕೊಂಡು ರಬ್ಬರ್ ಮಂಡಳಿ…