ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಅಧ್ಯಯನ ಮಾಡಿಕೊಂಡು ರಬ್ಬರ್ ಮಂಡಳಿ ಹಾಗೂ ಕೇಂದ್ರ ಸರಕಾರದ ಜತೆ ಚರ್ಚಿಸುವ ಜತೆಗೆ ರಬ್ಬರ್ ಬೆಳೆಯ ಮೌಲ್ಯವರ್ಧನೆಗಾಗಿ ಸ್ಥಳೀಯವಾಗಿ ಕೈಗಾರಿಕೆಗಳನ್ನು ಅನುಷ್ಠಾನಿಸುವ ಪ್ರಯತ್ನ ಮಾಡಲಾಗುವುದು ಎಂದು ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಹಾಗೂ ರಾಜ್ಯದ ರಬ್ಬರ್ ವ್ಯವಹಾರ ಮಾಡುವ ಸಹಕಾರ ಸಂಘಗಳ ಆಶ್ರಯದಲ್ಲಿ ಶನಿವಾರ ಉಜಿರೆಯಲ್ಲಿ ನಡೆದ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ವನ್ಯಜೀವಿಗಳಿಂದಾಗುವ ಬೆಳೆ ನಷ್ಟಕ್ಕೂ ಬೆಳೆ ವಿಮೆ ಕೇಂದ್ರದ ಬೆಳೆ ವಿಮೆ ಯೋಜನೆಯನ್ನು ಕಾಡುಪ್ರಾಣಿಗಳಿಂದ ಆಗುವ ಬೆಳೆ ನಷ್ಟಕ್ಕೂ ಅನ್ವಯಿಸಲಾಗುವುದು. ಜತೆಗೆ ಕೃಷಿಗೆ ಸಂಬಂಧಿಸಿ ಮಣ್ಣು ಪರೀಕ್ಷೆಯ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು, ಮುಂದೆ ಮಣ್ಣಿಗೆ ಪೂರಕವಾಗಿ ಪೋಷಕಾಂಶಗಳನ್ನು ನೀಡುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಲಿದೆ ಎಂದರು.
`ನ್ಯಾಚುರಲ್ ರಬ್ಬರ್ ಇಕಾನಮಿ ಇನ್ ಕರ್ನಾಟಕ-ಅಟ್ ದಿ ಕ್ರಾಸ್ ರೋಡ್ಸ್’ ಎಂಬ ವರದಿ ಸಿದ್ಧಪಡಿಸಿದ್ದ ಹಿರಿಯ ಅರ್ಥಶಾಸ್ತ್ರಜ್ಞ ಡಾ| ವಿಘ್ನೇಶ್ವರ ವರ್ಮುಡಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಅಧಿವೇಶನದಲ್ಲಿ ಮಾತನಾಡುವೆ:
ಅಧ್ಯಯನ ವರದಿ ಬಿಡುಗಡೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಪ್ರಸ್ತುತ ರಬ್ಬರ್ ಬೆಳೆಯನ್ನು ಕೃಷಿ ಎಂದು ಪರಿಗಣಿಸದ ಕಾರಣ ಸರಕಾರದ ಸೌಲಭ್ಯಗಳು ಕೂಡ ಸಿಗುತ್ತಿಲ್ಲ. ಸಮಾವೇಶದ ನಿರ್ಣಯಗಳನ್ನು ಸರಕಾರಕ್ಕೆ ಮುಟ್ಟಿಸಿ ಅಽವೇಶನದಲ್ಲಿ ಬೆಳೆಗಾರರ ಪರ ಮಾತನಾಡುತ್ತೇವೆ ಎಂದರು.
ರಬ್ಬರ್ ಮಂಡಳಿ ಕೇರಳ ಪ್ರಾದೇಶಿಕ ಕಚೇರಿಯ ಅಭಿವೃದ್ಧಿ ಅಧಿಕಾರಿ ಎಂ.ಪಿ. ಪವಿತ್ರನ್ ನಂಬಿಯಾರ್ ಉಪನ್ಯಾಸ ನೀಡಿದರು.
ಮಂಡಳಿ ಸದಸ್ಯ ಮುಳಿಯ ಕೇಶವ ಭಟ್, ರಾಜ್ಯ ರಬ್ಬರ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಯು.ವಿ. ಶಾಜಿ, ಎಸ್ ಕೆಡಿಆರ್‌ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್. ಎಸ್., ಮಂಡಳಿಯ ಮಂಗಳೂರು ಪ್ರಾದೇಶಿಕ ಕಚೇರಿಯ ಅಭಿವೃದ್ಧಿ ಅಧಿಕಾರಿ ಮಿನಿ ನಿನಾನ್, ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.
ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಸಂಯೋಜಕ ಅನಂತ ಭಟ್ ಎಂ. ಮುಂಡಾಜೆ ನಿರ್ಣಯ ಮಂಡಿಸಿದರು. ವೇದಿಕೆಯ ಉಪಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಸುಳ್ಯ, ಗೋಪಾಲಕೃಷ್ಣ ಭಟ್, ಕಾರ್ಯದರ್ಶಿಗಳಾದ ರಾಜು ಶೆಟ್ಟಿ ಉಜಿರೆ, ವಿಜಯಕೃಷ್ಣ ಸುಳ್ಯ ಉಪಸ್ಥಿತರಿದ್ದರು.
ಹಿತರಕ್ಷಣ ವೇದಿಕೆಯ ಅಧ್ಯಕ್ಷ ಶ್ರೀಧರ ಜಿ. ಭಿಡೆ ಸ್ವಾಗತಿಸಿ, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಪುತ್ತೂರು ವಂದಿಸಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
























