ಉಪ್ಪಿನಂಗಡಿ: ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಮಂಗಳೂರು ಮಹಾನಗರದ ಕೆಸರಿನ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ಜುಲೈ 20ರಂದು ಕಡಬದ ಆಲಂಕಾರು ಮಾಯಿಲ್ಗ ಗದ್ದೆಯಲ್ಲಿ ಜರಗಿತು.
ಕೆಸರಿನ ಗದ್ದೆಗೆ ಹಾಲು ಎರೆದು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ, ಕೃಷಿಯ ಸದ್ಯದ ಪರಿಸ್ಥಿತಿ ಹಾಗೂ ಅದರಲ್ಲಿ ಯುವಜನತೆಯ ಪಾತ್ರದ ಬಗ್ಗೆ ಮಾತನಾಡಿ, ಶುಭಹಾರೈಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಸುರೇಶ್ ಕೂಡೂರು ಶುಭಕೋರಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರ ಸಂಚಾಲಕ ಆನಂದ ಕುಂಟಿನಿ ಅಧ್ಯಕ್ಷತೆ ವಹಿಸಿದ್ದರು. ಆಲಂಕಾರು ಗ್ರಾಪಂ ಅಧ್ಯಕ್ಷೆ ಸುಶೀಲ, ಪೆರಾಬೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಕೆದ್ದೋಟೆ ಶುಭಹಾರೈಸಿದರು. ಮಾಯಿಲ್ಗ ಗದ್ದೆಯ ಮಾಲಕ ಮನೋಹರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಯೋಗ ಬಂಧುಗಳು ಅಗ್ನಿಹೋತ್ರ ನಡೆಸಿದರು. ಅತಿಥಿಗಳನ್ನು ಚೆಂಡೆ ವಾದನ ಹಾಗೂ ಕಂಬಳದ ಕೋಣಗಳ ಮೂಲಕ ಸ್ವಾಗತಿಸಿ, ವೇದಿಕೆಗೆ ಕರೆತರಲಾಯಿತು.
ಸಮಿತಿಯ ಭಾರತಿ ಶಾಖೆಯ ಮುತ್ತಪ್ಪ ಪ್ರಾರ್ಥಿಸಿ, ಉಪ್ಪಿನಂಗಡಿ ನಗರ ಸಂಚಾಲಕ ಸಂತೋಷ್ ಕುಮಾರ್ ಸ್ವಾಗತಿಸಿದರು. ಸಮಿತಿಯ ಸೇವಾ ವಿಭಾಗದ ಪ್ರಾಂತ ಸಂಚಾಲಕ ರವೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪಿನಂಗಡಿ ನಗರದ ವರದಿ ಪ್ರಮುಖ್ ಮುರಳಿ ಮೋಹನ್ ವಂದಿಸಿ, ಚೇತನ್ ಕುಮಾರ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.
ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ವಿವಿಧ ಆಟೋಟ ಏರ್ಪಡಿಸಿದ್ದು, ಮನರಂಜನಾ ಕ್ರೀಡೆಗಳನ್ನು ಆಡಿಸಲಾಯಿತು. ಮಂಗಳೂರು ಹಾಗೂ ಉಪ್ಪಿನಂಗಡಿಯ 450ಕ್ಕೂ ಅಧಿಕ ಯೋಗಬಂಧುಗಳು ಪಾಲ್ಗೊಂಡರು.
ಸಮಾರೋಪ:
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭ ಆಲಂಕಾರು ಭಾರತಿ ಶಾಖೆಯ ಯೋಗ ಶಿಕ್ಷಕಿ ಮಲ್ಲಿಕಾ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರು ಕೃಷಿಯೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ, ಶುಭಕೋರಿದರು.
ನೇತ್ರಾವತಿ ವಲಯದ ನಿಕಟಪೂರ್ವ ಸಂಚಾಲಕ ಗೋಕುಲನಾಥ್ ಸಮಾರೋಪ ಮಾತುಗಳನ್ನಾಡಿದರು. ಉಪ್ಪಿನಂಗಡಿ ನಗರ ಶಿಕ್ಷಣ ಪ್ರಮುಖ್ ಪ್ರದೀಪ್, ಸೇವಾ ವಿಭಾಗದ ಪ್ರಾಂತ ಸಂಚಾಲಕ ರವೀಶ್ ಕುಮಾರ್, ಮಂಗಳೂರು ನಗರದ ಸಂಚಾಲಕ ಪ್ರಕಾಶ್, ಸಹಸಂಚಾಲಕ ದಾಮೋದರ್, ಸ್ಥಳದ ಯಜಮಾನರಾದ ಗೀತಾ, ಉಮೇಶ್ ಉಪಸ್ಥಿತರಿದ್ದರು.
ಉಪ್ಪಿನಂಗಡಿ ನಗರ ಶಿಕ್ಷಣ ಸಹಪ್ರಮುಖ್ ಕೃಷ್ಣಪ್ಪ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕ ನಾರಾಯಣ ನೆಕ್ಕರೆ ವಂದಿಸಿದರು. ಭಾರತಿ ಯೋಗಶಾಖೆಯ ಶಿಕ್ಷಕ ಗುರುಕಿರಣ್ ಕಾರ್ಯಕ್ರಮ ನಿರೂಪಿಸಿದರು. ಧ್ಯಾನ ಹಾಗೂ ಲೋಕ ಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
ಆಲಂಕಾರು ಭಾರತಿ ಶಾಖೆಯ ಆತಿಥ್ಯದಲ್ಲಿ ಮಂಗಳೂರು ಮಹಾನಗರದ ಸಮಿತಿ ಸಂಚಾಲಕ ಆನಂದ ಕುಂಟಿನಿ, ಉಪ್ಪಿನಂಗಡಿ ನಗರ ಸಂಚಾಲಕ ಸಂತೋಷ್ ಕುಮಾರ್, ಶಿಕ್ಷಣ ಪ್ರಮುಖ್ ಪ್ರದೀಪ್, ಶಿಕ್ಷಣ ಸಹಪ್ರಮುಖ್ ಕೃಷ್ಣಪ್ಪ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.