ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಹುತೇಕ ತಾಲೂಕುಗಳಲ್ಲಿ ಮಂಗಗಳ ಹಾವಳಿಯಿಂದ ಕೃಷಿ ಸಂಪತ್ತು ಕೋಟ್ಯಾಂತರ ರೂ. ಫಸಲು ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರಕಾರದ ವತಿಯಿಂದ ಮಾಡಬೇಕಾಗಿದೆ. ಸುಮಾರು ಹದಿನಾಲ್ಕು ವರ್ಷಗಳಿಂದ ಮಂಗಗಳ ಹಾವಳಿಯನ್ನು ತಡೆಗಟ್ಟಲು ಮಂಕಿ ಪಾರ್ಕ್ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ಇಲ್ಲಿಯ ತನಕ ಕಾರ್ಯಗತವಾಗಿಲ್ಲ. ಆದ್ದರಿಂದ ಮಂಕಿ ಪಾರ್ಕ್ ಜೊತೆಗೆ ಪ್ರಾಣಿಗಳ ಹಾವಳಿಯಿಂದ ಕೃಷಿಗೆ ಆಗುತ್ತಿರುವ ಹಾನಿಗೆ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಮಹಾಸಭಾದ ನಿಯೋಗ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿಯಾಗಿ ಮನವಿ ನೀಡಿತು.
2024ರ ಆಗಸ್ಟ್ 13ರಂದು ದ.ಕ. ಜಿಲ್ಲಾಧಿಕಾರಿ ತಮ್ಮ ಕಛೇರಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಮಂಕಿ ಪಾರ್ಕ್ ರಚನೆಯ ಬಗ್ಗೆ ಚರ್ಚಿಸುವ ಸಮಯದಲ್ಲಿ ಎಲ್ಲಾ ರೈತ ಮುಖಂಡರು ರೈತರಿಗೆ ತಾವು ಬೆಳೆಸಿದ ಬೆಳೆಯ ಫಸಲು ಕೈಗೆಬರುವಂತೇ ಮಾಡುವುದೇ ಪರಿಹಾರವೆಂದು ಒಕ್ಕೊರೊಲಿನಿಂದ ತಿಳಿಸಿರುತ್ತಾರೆ. ಮಂಗಗಳ ಹಾವಳಿಯನ್ನು ತಡೆಗಟ್ಟಲು ವೈಜ್ಞಾನಿಕ ರೀತಿಯಲ್ಲಿ ಮಂಕಿ ಪಾರ್ಕ್ ನಿರ್ಮಿಸಿ ಅದರಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಬಹುದು. ಅದೇ ರೀತಿ ನವಿಲುಗಳು ಕೃಷಿ ಜಮೀನಿಗೆ ಲಗ್ಗೆ ಇಡುತ್ತಿದ್ದು ಇದರ ನಿಯಂತ್ರಣಕ್ಕೆ ನವಿಲು ಪಾರ್ಕ್ ನಿರ್ಮಾಣಕ್ಕೂ ಕೂಡ ಹಲವಾರು ವರ್ಷಗಳ ಮನವಿ ಮನವಿಯಾಗಿಯೇ ಉಳಿದಿದೆ.
ಹಂದಿ ಹಾಗೂ ಮುಳ್ಳು ಹಂದಿಗಳ ಕಾಟದಿಂದಾಗಿ ಆಗುವ ಕೃಷಿ ನಾಶ ನಷ್ಟಗಳನ್ನು ರಕ್ಷಿಸಲು ಕೋವಿಯನ್ನು ಬಳಸಲು ಅವಕಾಶ ನೀಡುವಂತೆಯೂ ಮನವಿ ನೀಡಲಾಗಿತ್ತು.
ಈ ಎಲ್ಲಾ ಮನವಿಗಳ ಬಗ್ಗೆ ತಾವು ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಬೇಕು. ಅವರಿಗೆ ಈ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ರೈತರಿಗೆ ಮಂಗಗಳಿಂದಾಗುವ ಸಮಸ್ಯೆಯನ್ನು ಬಗೆಹರಿಸಿ ಶಾಶ್ವತ ಪರಿಹಾರಕ್ಕಾಗಿ ವಿಧಾನಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಯವರ ಗಮನಕ್ಕೆ ತರಲು ಪ್ರಯತ್ನಿಸಬೇಕಾಗಿ ವಿನಂತಿ ಮಾಡಿಕೊಂಡರು. ಅಲ್ಲದೇ, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಂಗಗಳು,ಕಾಡು ಹಂದಿ ಹಾಗೂ ನವಿಲುಗಳ ಹಾವಳಿಯಿಂದ ಕೃಷಿ ಮತ್ತು ಫಸಲು ನಾಶದ ಬಗ್ಗೆ ಶಾಶ್ವತ ಪರಿಹಾರ ಒದಗಿಸಿ ಕೊಡುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ನಾಯಕ ರಾಮಣ್ಣ ವಿಟ್ಲ, ಅಖಿಲ ಭಾರತ ಕಿಸಾನ್ ಮಹಾ ಸಭಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಹಾವೀರ ಜೈನ್, ಅಚ್ಚುತ್ತ ಕಟ್ಟೆ, ಪ್ರೇಮ, ಅಶೋಕ್ ಪೂಜಾರಿ ಎನ್.ಎಸ್.ಡಿ, ಅಬ್ಬು ನವಗ್ರಾಮ ಮೊದಲಾದವರು ಉಪಸ್ಥಿತರಿದ್ದರು.