ಸರಕಾರಿ ಶಾಲೆಗಳೆಂದರೆ ಅಲ್ಲಿ ಸಕಲ ವ್ಯವಸ್ಥೆಗಳಿರುವುದಿಲ್ಲ, ಇಂಗ್ಲಿಷ್ ಕಲಿಕೆಗೆ ಕಷ್ಟವಾಗುತ್ತದೆ, ಪ್ರಾಧ್ಯಾಪಕರ ಕೊರತೆಯಂತೂ ಇದ್ದೇ ಇರುತ್ತದೆ. ಹೀಗೆ ಹೆಚ್ಚಿನವರಿಗೆ ಸರಕಾರಿ ಶಾಲೆಗಳ ಬಗ್ಗೆ ಒಂದಷ್ಟು ಪೂರ್ವಾಗ್ರಹಗಳು ಇರುತ್ತವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿರುವ ಪುತ್ತಿಲಬೈಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನೆ ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ.
ಸರಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರಕಾರದ ಕೆಲಸವೆಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಬಿಳಿನೆಲೆ ಗ್ರಾಮದ ಮಂದಿ, ಎಸ್. ಡಿ. ಎಂ. ಸಿ. ತಂಡದ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕನಾಥರವರು ಸೇರಿಕೊಂಡು ಹಳ್ಳಿ ಶಾಲೆಯೊಂದನ್ನು ಮಾದರಿ ಶಾಲೆಯನ್ನಾಗಿ ರೂಪಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಅದರಲ್ಲೂ ಯಶಸ್ವಿಯೂ ಆಗಿದ್ದಾರೆ. ಇವರ ಪ್ರಯತ್ನದ ಫಲವಾಗಿ ಇದೇ ಗ್ರಾಮದಲ್ಲಿ ಪ್ರತ್ಯೇಕ ಮಠದ ಶಾಲೆ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿದ್ದರೂ ಇಲ್ಲಿನ ಸರಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆಗೆ ಈವರೆಗೆ ಕೊರತೆಯಾಗಿಲ್ಲ. ಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಊರ ಮಂದಿ ಕೈಜೋಡಿಸಿದರೆ ಸರಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಹೇಗೆ ರೂಪಿಸಬಹುದು ಎಂಬ ಮಾತಿಗೆ ಈ ಶಾಲೆ ಉತ್ತಮ ಉದಾಹರಣೆ.
ಮೂರು ಎಕರೆಯಲ್ಲಿ ಕೃಷಿ
ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಮಾತಿದೆ. ಇದೆ ನಿಜ ಆದರೆ ಇದರ ತಾತ್ಪರ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವುದಾದರೂ ಹೇಗೆ? ಹೇಳಿದರೆ ಅರ್ಥವಾಗದು! ಪ್ರಾಯೋಗಿಕವಾಗಿ ತಿಳಿಸಿದರೆ ಹೇಗೆ?
ಕೃಷಿಯನ್ನು ಪ್ರಾಯೋಗಿಕವಾಗಿ ತಿಳಿಸುವ ಕಾಯಕಕ್ಕೆ ಪುತ್ತಿಲಬೈತಡ್ಕ ಶಾಲೆ ಮುಂದಾಯಿತು. ವಿದ್ಯಾರ್ಥಿಗಳಿಗೆ ತೋಟ ಎಂದರೇನು? ತೋಟಕ್ಕೆ ಇಳಿದು ಕೆಲಸ ಮಾಡುವುದು ಹೇಗೆ? ತೋಟದ ನಿರ್ವಹಣೆ ಹೇಗೆ? ಮೊದಲಾದ ವಿಚಾರಗಳನ್ನು ಪ್ರಾಯೋಗಿಕವಾಗಿ ತಿಳಿಸಿ ಕೊಡಲಾಗುತ್ತಿದೆ. ಇದು ಎಳವೆಯಲ್ಲೇ ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಜಾಗೃತಿ ಮತ್ತು ಆಸಕ್ತಿಯನ್ನು ಮೂಡಿಸುತ್ತದೆ. ಇದು ಪುತ್ತಿಲಬೈತಡ್ಕ ಶಾಲೆಯಲ್ಲಿ ಯಶಸ್ವಿಯೂ ಆಗಿದೆ.
2020ರಲ್ಲಿ ಮುಖ್ಯೋಪಾಧ್ಯಾಯರಾಗಿ ಲೋಕನಾಥ ಅವರು ಕರ್ತವ್ಯ ನಿರ್ವಹಿಸಲು ಆರಂಭಿಸಿದ ನಂತರ ಶಾಲಾ ಜಮೀನಿನಲ್ಲಿ ಕೃಷಿ ಮಾಡಬೇಕು ಎಂಬ ಇವರ ಯೋಚನೆಗಳಿಗೆ ಊರವರು ಸಾಥ್ ನೀಡಿದರು. ಪರಿಣಾಮವಾಗಿ ಮೂರು ಎಕರೆಯಲ್ಲಿ ಇದೀಗ 230 ರಬ್ಬರ್, 110 ಅಡಕೆ ಗಿಡಗಳು ಫಸಲು ನೀಡಲು ಸಿದ್ಧವಾಗಿವೆ. ಸಪೋಟ, ನೆಲ್ಲಿ, ಜಂಬು ನೇರಳೆ, ಕಸಿ ಹಲಸು, ನುಗ್ಗೆ, ಬಸಾಳೆ, ಬಾಳೆ ಮುಂತಾದ ಹಣ್ಣಿನ ಗಿಡಗಳು ಸರ್ವಋತುಗಳಲ್ಲೂ ಹಣ್ಣುಗಳನ್ನು ನೀಡುತ್ತಿವೆ. ಈ ಹಣ್ಣುಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪುಟಾಣಿಗಳಲ್ಲಿ ಕೃಷಿ ಆಸಕ್ತಿಯನ್ನು ಬೆಳೆಸುತ್ತಿದ್ದಾರೆ. ಬಿಸಿಯೂಟದ ಪದಾರ್ಥದ ರುಚಿ ಹೆಚ್ಚಿಸಲು ದಿನಕ್ಕೆರಡು ತೆಂಗಿನ ಕಾಯಿಯನ್ನು ಶಾಲಾ ತೋಟದಲ್ಲಿರುವ ತೆಂಗಿನ ಮರಗಳು ನೀಡುತ್ತಿವೆ.
ಇಂಗ್ಲಿಷ್ ಕಲಿಕೆಗೆ ಊರವರ ಸಹಕಾರ
ಕನ್ನಡ ಶಾಲೆಯಲ್ಲಿ ಕಲಿಯುವ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಯಲು ಪ್ರೇರಣೆ ನೀಡಲು ಪೂರಕವಾಗಿ ಒಂದಷ್ಟು ಮೊತ್ತವನ್ನು ಜೋಡಿಸಿ, ಇಂಗ್ಲಿಷ್ ಕಲಿಕೆಗಾಗಿ ಶಿಕ್ಷಕಿಯೋರ್ವರನ್ನು ನೇಮಿಸಿದ್ದಾರೆ. ಈ ಪ್ರಯತ್ನದಿಂದಾಗಿ ಇಲ್ಲಿನ ಮಕ್ಕಳು ಇಂದು ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಸರಿಸಾಟಿಯಾಗಿ ಇಂಗ್ಲಿಷ್ ಭಾಷೆಯ ಪ್ರೌಢಿಮೆಯನ್ನು ಪಡೆದಿದ್ದಾರೆ.
ಧರ್ಮಸ್ಥಳದ ಸಹಕಾರ :
ಈ ಶಾಲೆಯ ಅಭಿವೃದ್ಧಿಯ ಪ್ರತಿ ಹಂತದಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಾಯದ ನೆರವನ್ನು ನೀಡುತ್ತಾ ಬಂದಿದೆ. ಶಾಲೆಗೆ ವಿದ್ಯುತ್ ವ್ಯವಸ್ಥೆ, ಆಟದ ಮೈದಾನ ರಚನೆ, ಗ್ಯಾಲರಿ, ರಂಗ ಮಂದಿರ ನಿರ್ಮಾಣ. ಊಟದ ಹಾಲ್, ಸಭಾಭವನ ರಚನೆ, ಶಾಲಾ ಕೊಠಡಿ ನಿರ್ಮಾಣ, ಬಾವಿ ತೋಡಲು ಹೀಗೆ ಶಾಲೆಯ ಪ್ರತಿಯೊಂದು ಕೆಲಸಗಳಿಗೂ ಧರ್ಮಸ್ಥಳ ಸಹಾಯ ಮಾಡಿರುವುದನ್ನು ಊರಿನ ಮಂದಿ ನೆನಪಿಸಿಕೊಳ್ಳುತ್ತಾರೆ.
ಜ್ಞಾನದೀಪ ಶಿಕ್ಷಕಿ :
ಕಳೆದ ಹದಿಮೂರು ವರ್ಷಗಳಿಂದ ಶಾಲೆಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ. ಇದರಿಂದಾಗಿ ಏಳನೇ ತರಗತಿಯವರೆಗೆ ಶಿಕ್ಷಣವನ್ನು ನೀಡಲು, ಸಾಕಷ್ಟು ಶಾಲಾ ಚಟುವಟಿಕೆಗಳನ್ನು ಕೈಗೊಳ್ಳಲು ಹೀಗೆ ಎಲ್ಲ ರೀತಿಯಿಂದಲೂ ಸಾಕಷ್ಟು ಸಹಾಯಕ ಆಗಿದೆ ಎನ್ನುತ್ತಾರೆ ಇಲ್ಲಿನ ಪ್ರಾಧ್ಯಾಪಕರು. ಪ್ರಸ್ತುತ ಇಬ್ಬರು ಖಾಯಂ ಶಿಕ್ಷಕರು. ಒಬ್ಬರು ಅತಿಥಿ ಉಪನ್ಯಾಸಕರು, ಒಬ್ಬರು ಜ್ಞಾನದೀಪ, ಊರವರು ನೇಮಿಸಿದ ಓರ್ವರು ಹೀಗೆ ಒಟ್ಟು ಐದು ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಊರವರಿಂದಲೇ ಶಿಕ್ಷಕರ ನೇಮಕ :
ಪ್ರಸ್ತುತ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ನಲುವತ್ತೈದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರಕಾರ ಇಬ್ಬರು ಶಿಕ್ಷಕರನ್ನು ನೀಡಿದೆ. ಶಿಕ್ಷಕರಿಲ್ಲ ಎಂದು ಊರವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವ ಬದಲು ಊರವರೇ ಒಬ್ಬರು ಶಿಕ್ಷಕರನ್ನು ನೇಮಿಸಿದ್ದಾರೆ. ಇಂತಹ ಪ್ರಯತ್ನ ಎಲ್ಲೆಡೆ ನಡೆದಾಗ ಕನ್ನಡ ಶಾಲೆಗಳು ಉಳಿಯುತ್ತವೆ ಎಂಬುವುದರಲ್ಲಿ ಸಂದೇಹವಿಲ್ಲ.
ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ :
ಇಂದು ರಾಜಕೀಯ ಎನ್ನುವುದು ಸರ್ವಧರ್ಮಿಯರು ಒಂದಾಗುವ ಕೆಲವು ಶಾಲೆಗಳ ಮೆಟ್ಟಿಲು ಹತ್ತಿದೆ. ಆದರೆ ಮತ್ತಿಲಬೈಲಡ್ಕ ಶಾಲೆಯ ಆವರಣದೊಳಗೆ ರಾಜಕೀಯದ ಗಾಳಿ ಬೀಸಲು ಅವಕಾಶಗಳಿಲ್ಲ. ಊರವರ, ಸಂಘ ಸಂಸ್ಥೆಗಳ, ರಾಜಕಾರಣಿಗಳ ಹೀಗೆ ಸರ್ವರ ಸಹಾಯವನ್ನು ಸಮಾನ ಮನಸ್ಸಿನಲ್ಲಿ ಇವರು ಪಡೆಯುತ್ತಾರೆ. ರಾಜಕೀಯ ಮುಖಂಡರ ಸಹಾಯದಿಂದ ಶಾಲೆಯ ಮೂರು ಎಕರೆಗೆ ಸುತ್ತಲಾಗಿ ಕಾಂಪೌಂಡು ಅನ್ನು ನಿರ್ಮಿಸಿರುವುದನ್ನು ಶಾಲಾ ಮುಖ್ಯೋಪಾಧ್ಯಾಯರು ನೆನಪಿಸಿಕೊಳ್ಳುತ್ತಾರೆ.
ಇಲ್ಲಿ ಎಲ್ಲವೂ ಇದೆ :
ಇಂಗ್ಲಿಷ್ ಶಿಕ್ಷಣ, ಯೋಗಾ, ಸುಂದರವಾದ ಗಾರ್ಡನ್, ಕಾರಂಜಿ, ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣ, ವಿಶಾಲವಾದ ಮೈದಾನ, ಕುಡಿಯಲು ನೀರಿನ ಬಾವಿ, ಕೊಳವೆ ಬಾವಿ. ಮೈಕಾ ಸೆಟ್ ಹೀಗೆ ಇಲ್ಲಿ ಎಲ್ಲವೂ ಇದೆ.
ಮನೆ ವಾತಾವರಣ ಕಲ್ಪಿಸುವ ಶಾಲೆ :
ಮಕ್ಕಳ ಪಾಲಿಗೆ ಇದು ಶಾಲೆಯಲ್ಲ, ಜೀವನ ಶಿಕ್ಷಣವನ್ನು ಕಲ್ಪಿಸುವ ತಾಣ. ಮನೆಯಲ್ಲಿ ಸಿಗುವ ಎಲ್ಲ ವ್ಯವಸ್ಥೆಗಳೊಂದಿಗೆ ಪ್ರಾಧ್ಯಾಪಕರ ವಿಶೇಷ ಪ್ರೀತಿಯೂ ಇಲ್ಲಿ ಮಕ್ಕಳಿಗೆ ದೊರೆಯುತ್ತದೆ. ಶಾಲೆಯ ಪ್ರತಿಯೊಂದು ಕೆಲಸ, ಕಾರ್ಯಕ್ರಮವು ಊರಿನವರ ಸಂಪೂರ್ಣ ತೊಡಗಿಸುವಿಕೆಯಲ್ಲಿ ನಡೆಯುತ್ತದೆ. ಪ್ರಾಧ್ಯಾಪಕರಿಗೆ ಏನೇ ಸಮಸ್ಯೆಗಳಾದರೂ ಊರವರು ನೆರವಿಗೆ ಬರುತ್ತಾರೆ. ಶಿಕ್ಷಕರು ಮತ್ತು ಹೆತ್ತವರ ನಡುವೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ನಡುವೆ
ಬಿಸಿಯೂಟಕ್ಕೆ ಪ್ರತಿ ದಿನ ಮಜ್ಜಿಗೆ:
ಪ್ರತಿದಿನ ಹೆತ್ತವರು ಮಕ್ಕಳಲ್ಲಿ ಕೊಟ್ಟು ಕಳುಹಿಸಿದ ಮಜ್ಜಿಗೆಯನ್ನು ಎಲ್ಲ ಮಕ್ಕಳಿಗೆ ಹಂಚುವ ಮೂಲಕ ಹಂಚಿ ತಿನ್ನುವ ಪರಿಪಾಠವನ್ನು ಅಡುಗೆಯವರು ಇಲ್ಲಿನ ಮಕ್ಕಳಿಗೆ ಕಲಿಸಿ ಕೊಡುತ್ತಿದ್ದಾರೆ. ಇದರೊಂದಿಗೆ ಮಕ್ಕಳ ಮನೆಗಳಲ್ಲಿ ಏನಾದರು ವಿಶೇಷತೆಗಳು ಇದ್ದಾಗ ಶಾಲಾ ಮಕ್ಕಳಿಗೆ ಪಾಯಸ ನೀಡುವ ಸಂಪ್ರದಾಯವನ್ನು ಇಲ್ಲಿ ಬೆಳೆಸಿಕೊಂಡು ಬರಲಾಗಿದೆ.
ಕೈತೋಟದಲ್ಲಿ ತರಕಾರಿ :
ಈ ಹಿಂದೆ ಹಲವಾರು ವರ್ಷಗಳಲ್ಲಿ ಕೈತೋಟದಲ್ಲಿ ಸಾಕಷ್ಟು ತರಕಾರಿಗಳನ್ನು ಬೆಳೆದಿದ್ದಾರೆ. ಈ ಮೂಲಕ ಮಕ್ಕಳನ್ನು ತರಕಾರಿ ಬೆಳೆಯುವತ್ತಾ ಪ್ರೋತ್ಸಾಹಿಸಿದಂತೆಯೂ ಆಗಿದೆಯಂತೆ. ಇದೀಗ ಪ್ರತಿ ಮನೆಯವರು ಮಧ್ಯಾಹ್ನದ ಬಿಸಿ ಊಟಕ್ಕೆ ಬೇಕಾದ ತರಕಾರಿಯನ್ನು ನೀಡುತ್ತಿದ್ದಾರೆ. ಶಾಲಾ ಎದುರು ಭಾಗದಲ್ಲಿರುವ ಕಾರಂಜಿ ಮಕ್ಕಳ ಮನ ಗೆಲ್ಲುತ್ತಿದೆ.
ಪ್ರತಿವರ್ಷ ಆಟೋಟ :
ವರ್ಷದಲ್ಲಿ ಒಂದು ಬಾರಿ ಸುಮಾರು ಮೂರು ದಿನಗಳ ಕಾಲ ಶಾಲಾ ಮಕ್ಕಳಿಗೆ, ಒಂದು ದಿನ ಹಿರಿಯ ವಿದ್ಯಾರ್ಥಿಗಳಿಗೆ, ಒಂದು ದಿನ ಊರವರಿಗೆ ಹೀಗೆ ಪುಟಾಣಿಗಳಿಂದ ವೃದ್ಧರವರೆಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮವಂತೂ ಗಣ್ಯಾತೀಗಣ್ಯರ ಕೂಡುವಿಕೆಯೊಂದಿಗೆ ಶಾಲಾ ವಾರ್ಷಿಕೋತ್ಸವದಂತೆ ನಡೆಯುತ್ತದೆ.
ಬ್ರಹ್ಮಕಲಶದಂತೆ ಶಾಲಾ ವಾರ್ಷಿಕೋತ್ಸವ :
ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವ ಬ್ರಹ್ಮಕಲಶದಂತೆ ವಿಜೃಂಭಣೆಯಿಂದ ನಡೆದಿದೆ. ಇಲ್ಲಿ ಶಾಲಾ ವಾರ್ಷಿಕೋತ್ಸವದ ನೆಪದಲ್ಲಿ ಒಂದಷ್ಟು ಶಾಲೆಯ ಅಭಿವೃದ್ಧಿ ಕೆಲಸಗಳು ನಡೆದಿವೆ. 120 ಮೀಟರ್ ಕಾಂಪೌಂಡ್. ರಂಗಮಂದಿರಕ್ಕೆ ಟೈಲ್ಸ್ ಅಳವಡಿಕೆ, ತೆಂಗಿನ ಮರಗಳಿಗೆ ಕಟ್ಟೆ ರಚನೆ ಹೀಗೆ ಸಾಕಷ್ಟು ಕೆಲಸಗಳನ್ನು ವಾರ್ಷಿಕೋತ್ಸವದ ನೆನಪಿಗಾಗಿ ಊರವರು ಮಾಡಿದ್ದಾರೆ.
ಊರವರಿಂದ ಶ್ರಮದಾನ :
ಶಾಲೆಯ ಹೆಚ್ಚಿನ ಕೆಲಸಗಳ ಹಿಂದಿರುವ ಶಕ್ತಿ ಊರವರ ಶ್ರಮದಾನ. ಪ್ರತಿ ಕೆಲಸವನ್ನು ಶ್ರಮದಾನದ ಮೂಲಕ ಮಾಡುತ್ತಾರೆ. ಕಳೆದ ಬಾರಿ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸುಮಾರು 200 ಮಾನವ ಶ್ರಮದ ಕೆಲಸ ಇಲ್ಲಿ ಆಗಿದೆ. ಅಂದರೆ ರೂ. 1 ಲಕ್ಷದ ಕೆಲಸವನ್ನು ಊರವರೇ ಮಾಡಿದ್ದಾರೆ. ದಿವಂಗತ ವೆಂಕಪ್ಪ ಗೌಡ ಪುತ್ತಿಲರ ನೇತೃತ್ವದಲ್ಲಿ ಸ್ಥಾಪನೆಗೊಂಡ ಶಾಲೆ ಇದೀಗ 37ರ ಹರೆಯ. ಬಿಳಿನೆಲೆಯಂತಹ ಕುಗ್ರಾಮದಲ್ಲಿರುವ ಈ ಸರಕಾರಿ ಶಾಲೆಯೊಂದನ್ನು ಮಾದರಿ ಶಾಲೆಯಾಗಿ ಕಟ್ಟಿ ಬೆಳೆಸಿದ ಕೀರ್ತಿ ಊರವರಿಗೆ, ಶಾಲಾ ಅಧ್ಯಾಪಕ ವರ್ಗಕ್ಕೆ, ಎಲ್ಲ ಎಸ್. ಡಿ. ಎಂ. ಸಿ. ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ, ಪ್ರಸ್ತುತ ಶಾಲೆಯ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ವೆಂಕಟ್ರಮಣ ಗೌಡ ನೇತೃತ್ವದ ಎಸ್ಡಿಎಂಸಿ ತಂಡಕ್ಕೆ, ಹಳೆ ವಿದ್ಯಾರ್ಥಿ ಸಂಘಕ್ಕೆ ಸಲ್ಲುತ್ತದೆ. ಶಾಲೆಯ ಅಭಿವೃದ್ಧಿಯಲ್ಲಿ ಸರಕಾರಿ ಇಲಾಖೆಗಳು, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ಗಳು ಮತ್ತು ಶಾಸಕರುಗಳು ನೀಡಿದ ಕೊಡುಗೆಯು ಇಲ್ಲಿ ಸ್ಮರಣೀಯ. ಓಟ್ಟಾರೆಯಾಗಿ ಸರಕಾರಿ ಮಾದರಿ ಶಾಲೆಯೊಂದು ಹೇಗಿರಬೇಕೆಂಬ ಕಲ್ಪನೆಯನ್ನು ಇಲ್ಲಿನ ಮಂದಿ ನಮ್ಮೆದುರು ತೆರೆದಿಟ್ಟಿದ್ದಾರೆ. ಇಂತಹ ಪ್ರಯತ್ನಗಳು ಎಲ್ಲೆಡೆ ನಡೆಯುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ.
ಪರಿಸರ ಪ್ರೇಮ ಬೆಳೆಸುವ ‘ನನ್ನದೊಂದು ಗಿಡ’ :
ಪರಿಸರ ಬೆಳೆಸುವ ಮತ್ತು ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ, ಒಲವು ಮೂಡಿಸುವ ನಿಟ್ಟಿನಲ್ಲಿ ‘ನನ್ನದೊಂದು ಗಿಡ’ ಎಂಬ ವಿಶೇಷ ಪ್ರಯತ್ನವೊಂದು ಇಲ್ಲಿ ಯಶಸ್ಸನ್ನು ಕಂಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಚಟ್ಟಿ ಮತ್ತು ಗಿಡವನ್ನು ಶಾಲೆಗೆ ತಂದು ಎಲ್ಲರೆದುರು ಗಿಡವನ್ನು ಚಟ್ಟಿಯಲ್ಲಿ ನೆಡಬೇಕು. ಇದನ್ನು ಶಾಲೆಯ ಎದುರು ಭಾಗದಲ್ಲೆ ಇರಿಸಲಾಗುತ್ತದೆ. ಚಟ್ಟಿಯಲ್ಲಿ ಆಯಾ ವಿದ್ಯಾರ್ಥಿಗಳ ಹೆಸರನ್ನು ಬರೆಯಲಾಗುತ್ತದೆ. ಆ ಗಿಡಕ್ಕೆ ನಿತ್ಯ ನೀರುಣಿಸುವ, ಅದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಆಯಾ ಮಕ್ಕಳದ್ದೇ ಆಗಿರುತ್ತದೆ. ಹೀಗೆ ಶಾಲೆಯಲ್ಲಿ ಎಲ್ಲ ಮಕ್ಕಳ ಹೆಸರಿನಲ್ಲೂ ಒಂದೊಂದು ಗಿಡಗಳಿವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರಕೃತಿಯ ಜೊತೆಗಿನ ಒಡನಾಟವನ್ನು ಬೆಳೆಸುವ ಕೆಲಸ ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.
ಯೋಜನೆಯಿಂದ ಬದಲಾವಣೆ : ಲೋಕನಾಥ
ನಾನು ಮೂಲತಹ ಕುಂದಾಪುರದವನು. 1987ರಲ್ಲಿ ಈ ಶಾಲೆ ಆರಂಭವಾಯಿತು. 1997ರಲ್ಲಿ ನಾನು ಬಿಳಿನೆಲೆಗೆ ಬರುವಾಗ ಇದೊಂದು ಕುಗ್ರಾಮವಾಗಿತ್ತು. ಸುಮಾರು ಎರಡು ವರ್ಷಗಳವರೆಗೆ ಸುಮಾರು ಮೂರು ಕಿಲೋ ಮೀಟರ್ ದೂರದಿಂದ ಶಾಲೆಗೆ ನಡೆದು ಕೊಂಡು ಬರುತ್ತಿದ್ದೆ. ಆಗ ಇಲ್ಲಿನ ಒಬ್ಬರ ಮನೆಯಲ್ಲಿ ಮಾತ್ರ ಜೀಪು ಇತ್ತು. ಮೂರು ಕೊಠಡಿಗಳಿಂದ ಕೂಡಿದ್ದ ಶಾಲೆಯ ಸುತ್ತ ಕಾಡು ಬೆಳೆದಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಗಮನ ಬೆಳಿನೆಲೆಯ ಜನರ ಬದುಕನ್ನು ಬದಲಿಸಿತು. ಶಾಲೆಗೆ ಸಹಾಯ ನೀಡುವುದರ ಜೊತೆಗೆ ಶ್ರಮ ವಿನಿಮಯ, ಉಳಿತಾಯ, ಸ್ವ ಉದ್ಯೋಗ, ಮಹಿಳಾ ಸಬಲೀಕರಣ, ಸ್ವಾವಲಂಬನೆಯ ಬದುಕಿಗೆ ಬೇಕಾದ ಮಾರ್ಗದರ್ಶನ, ಪ್ರೇರಣೆ ಯೋಜನೆಯಿಂದ ದೊರೆಯಿತು. ಪರಿಣಾಮವಾಗಿ ಬಿಳಿನೆಲೆ ಇಂದು ಶ್ರೀಮಂತಿಕೆಯನ್ನು ಮೈಗೂಡಿಸಿಕೊಂಡಿದೆ. ಶಾಲೆಯ ಅಭಿವೃದ್ಧಿಯಲ್ಲಿ ಊರವರು ಕೈಜೋಡಿಸಿದ್ದಾರೆ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ನಾನು ಕೂಡಾ ನನ್ನ ಕೈಲಾದ ಪ್ರಯತ್ನವನ್ನು ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ಊರವರ ಮತ್ತು ಮಕ್ಕಳ ಪ್ರೀತಿಯ ಎದುರು ಈಗ ನಾನು ಇದೇ ಊರಿನವನಾಗಿ ಹೋಗಿದ್ದೇನೆ. ಈಗಾಗಲೇ ಸುಮಾರು 320 ಮಂದಿ ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿತವರು ಸಾಫ್ಟ್ವೇರ್ ಇಂಜಿನಿಯರ್ ಆಗಿಯೂ ಕೆಲಸ ಮಾಡುತ್ತಿರುವುದು ಶಾಲೆಗೆ ಹೆಮ್ಮೆಯ ಸಂಗತಿ. ಬಿಳಿನೆಲೆ ಗ್ರಾಮದ ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಧರ್ಮಸ್ಥಳದ ಪ್ರಯತ್ನ ಬಹು ದೊಡ್ಡದಿದೆ. ಒಂದು ವೇಳೆ ಯೋಜನೆ ಇಲ್ಲವಾದರೆ ಈ ಊರು ಇಂದಿಗೂ ಕುಗ್ರಾಮವಾಗಿಯೇ ಇರುತ್ತಿತ್ತು. ಪ್ರತಿದಿನ ಶಾಲೆಗೆ ಹೋದಾಗ ಧರ್ಮಸ್ಥಳಕ್ಕೆ ಹೋದಷ್ಟೇ ಸಂತೋಷ ನನಗಾಗುತ್ತದೆ. ಊರಿನ ಅಭಿವೃದ್ಧಿಯೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಹೆಗ್ಗಡೆಯವರು ನೀಡಿದ ಕೊಡುಗೆ ಬಹುದೊಡ್ಡದು.”
– ಲೋಕನಾಥ, ಮುಖ್ಯೋಪಾಧ್ಯಾಯರು ಪುತ್ತಿಲಬೈಲಡ್ಕ ಹಿರಿಯ ಪ್ರಾಥಮಿಕ ಶಾಲೆ