Friday, November 22
Share News

ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವಿನ ಹೈ ವೋಲ್ಟೇಜ್‌ ಕ್ರಿಕೆಟ್‌ ಪಂದ್ಯಕ್ಕೆ ಯಾವತ್ತೂ ಭಾರೀ ಡಿಮಾಂಡ್‌. ಕ್ರಿಕೆಟ್‌ ಅಭಿಮಾನಿಗಳು ಎಲ್ಲೇ ಇದ್ದರೂ, ಎಷ್ಟೇ ದುಡ್ಡು ಕೊಟ್ಟಾದರೂ ಈ ಪಂದ್ಯಕ್ಕಾಗಿ ಸ್ಟೇಡಿಯಂಗೆ ಲಗ್ಗೆ ಇಡುತ್ತಾರೆ. ಇದರ ಪರಿಣಾಮವೋ ಎಂಬಂತೆ, ಜೂ. 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಇತ್ತಂಡಗಳ ನಡುವಿನ ಟಿ20 ವಿಶ್ವಕಪ್‌ ಪಂದ್ಯದ ಟಿಕೆಟ್‌ಗಳು ಕೋಟಿ ರೂ. ಮೊತ್ತಕ್ಕೆ ಮಾರಾಟವಾಗುತ್ತಿವೆ. ಇದೊಂದು ಸಾರ್ವಕಾಲಿಕ ದಾಖಲೆ.

ಟಿ20 ವಿಶ್ವಕಪ್‌ ಪಂದ್ಯದ ಅತ್ಯಂತ ಕಡಿಮೆ ಮೊತ್ತದ ಟಿಕೆಟ್‌ಗಳೆಂದರೆ 6 ಡಾಲರ್‌ ಮೌಲ್ಯದ್ದು (497 ರೂ.). ಭಾರತ-ಪಾಕ್‌ ಪಂದ್ಯದ ಪ್ರೀಮಿಯಂ ಸೀಟ್‌ಗಳ ಟಿಕೆಟ್‌ ಬೆಲೆ, ತೆರಿಗೆ ರಹಿತವಾಗಿ 400 ಡಾಲರ್‌ ಆಗಿದೆ (33,148 ರೂ.). ಅಮೆರಿಕದ ವರದಿಯೊಂದರ ಪ್ರಕಾರ, ಸ್ಟಬ್‌ಹಬ್‌ ಮತ್ತು ಸೀಟ್‌ಗೀಕ್‌ನಂತಹ ಮರು ಮಾರಾಟ ವೇದಿಕೆಗಳಲ್ಲಿ ಈ ಟಿಕೆಟ್‌ಗಳ ಬೆಲೆ ಸಿಕ್ಕಾಪಟ್ಟೆ ಏರಿದೆ. 400 ಡಾಲರ್‌ ಟಿಕೆಟ್‌ 40 ಸಾವಿರ ಡಾಲರ್‌ಗಳಿಗೆ ಮರು ಮಾರಾಟವಾಗುತ್ತಿದೆ. ಅಂದರೆ ಸರಿಸುಮಾರು 33 ಲಕ್ಷ ರೂ.! ಇದಕ್ಕೆ ಫ್ಲ್ಯಾಟ್‌ಫಾರ್ಮ್ ಶುಲ್ಕ ಸೇರಿದರೆ 41 ಲಕ್ಷ ರೂ. ಆಗುತ್ತದೆ (50 ಸಾವಿರ ಡಾಲರ್‌).

ಪಂದ್ಯದ ಅತ್ಯಂತ ದುಬಾರಿ ಟಿಕೆಟ್‌ ಬೆಲೆ 1,75,000 ಡಾಲರ್‌ ಆಗಿದೆ. ಅಂದರೆ 1.4 ಕೋಟಿ ರೂ.! ಇದಕ್ಕೆ ಇತರ ಶುಲ್ಕಗಳನ್ನು ಸೇರಿಸಿದರೆ ಟಿಕೆಟ್‌ ಬೆಲೆ 1.86 ಕೋಟಿ ರೂ.ಗೂ ಹೆಚ್ಚಾಗುತ್ತದೆ ಎಂದು “ಯುಎಸ್‌ಎ ಟುಡೇ’ ವರದಿ ಮಾಡಿದೆ.


Share News

Comments are closed.

Exit mobile version