ಪುತ್ತೂರು: ಸಂಪ್ಯ ಕೆರೆ ಧಾರ್ಮಿಕ, ಐತಿಹಾಸಿಕ ಮಹತ್ವವುಳ್ಳದ್ದು. ಆದರೆ ಈಗ ಬಲಿ ತೆಗೆದುಕೊಳ್ಳಲು ಕೆರೆ ಬಾಯ್ದೆರೆದು ನಿಂತಂತೆ ಭಾಸವಾಗುತ್ತಿದೆ.
ಒಂದೊಮ್ಮೆ ಸಂಪ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇರಿದಂತೆ ಹಲವು ಗಣಪತಿ ಮೂರ್ತಿಗಳ ವಿಸರ್ಜನೆ ಆಗುತ್ತಿದ್ದ ಪ್ರದೇಶ. ಚಾರಿತ್ರಿಕವಾಗಿಯೂ ಮನ್ನಣೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಲಕ್ಷಾಂತರ ರೂ. ಸುರಿದು ಕೆರೆ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಕ್ರಮೇಣ ಆ ಕಾಮಗಾರಿಗಳು ‘ಕೆರೆಗೆ ಹಾರ’ ಆದವು.
ಸದ್ಯ ಕೆರೆಯ ಸ್ಥಿತಿ ಹೀನಾಯವಾಗಿದೆ. ಗಣಪತಿಯೂ ಕೆರೆಯತ್ತ ಸುಳಿಯದಂತ ಪರಿಸ್ಥಿತಿ. ಅದರಲ್ಲೂ ಕೆರೆಯ ಆವರಣ ಕಿತ್ತು ಹೋಗಿ, ಬದಿಯಲ್ಲೇ ಇರುವ ರಸ್ತೆಯಲ್ಲಿ ನಡೆದಾಡುವ ಪಾದಚಾರಿ, ವಾಹನ ಸವಾರರನ್ನು ಆಹುತಿ ತೆಗೆದುಕೊಳ್ಳುವಂತಿದೆ. ಆದ್ದರಿಂದ ಸಂಬಂಧಪಟ್ಟವರು ಗಮನ ಹರಿಸಿ, ಕನಿಷ್ಠ ಅಪಾಯದ ಮುನ್ನೆಚ್ಚೆರಿಕೆಯ ಲೇಬಲ್ ಆದರೂ ಅಳವಡಿಸಿದರೆ ಒಳಿತು.
ರಾತ್ರಿ ಹೊತ್ತು ಈ ರಸ್ತೆ ಕತ್ತಲ ಕೂಪ. ರಸ್ತೆ – ಕೆರೆಯ ವ್ಯತ್ಯಾಸ ಅರಿವಾಗದೇ, ಮಂದಿ ನೇರವಾಗಿ ಕೆರೆಯ ಒಡಲಿಗೆ ಕಾಲಿಡುವ ಭೀತಿ ಸ್ಥಳೀಯರದ್ದು. ಆದ್ದರಿಂದ ಒಂದು ದಾರಿದೀಪವಾದರೂ ಕೆರೆ ಬಳಿ ಅಳವಡಿಸಿ ಎಂಬ ದೈನ್ಯತೆಯ ಮನವಿ ಮಾಡಿಕೊಂಡಿದ್ದಾರೆ.