ಉಪ್ಪಿನಂಗಡಿ: ಕೊಯಿಲದಲ್ಲಿರುವ ಜಾನುವಾರು ಸಂವರ್ಧನಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಮಟ್ಟದಲ್ಲಿ ಪಶು ಆಹಾರ ಉತ್ಪಾದನಾ ಕೇಂದ್ರ ಸ್ಥಾಪಿಸಲು ದಕ್ಷಿಣ ಕನ್ನಡ ಸಹಕಾರ ಹಾಲು ಒಕ್ಕೂಟ ಮುಂದಾಗಿದೆ. ಇದಕ್ಕಾಗಿ ಪಶು ಸಂಗೋಪನಾ ಕ್ಷೇತ್ರದೊಳಗೆ 100 ಎಕರೆ ನೀಡುವಂತೆ ಹಾಲು ಒಕ್ಕೂಟ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ.
ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಸುಮಾರು 780 ಎಕರೆ ಇದ್ದು, ಈ ಪೈಕಿ ಪಶು ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಕ್ಕಾಗಿ ಸುಮಾರು 250 ಎಕರೆ ನೀಡಲಾಗಿದೆ. ಇಲ್ಲಿ ಇನ್ನೂ ಸುಮಾರು 500 ಎಕರೆ ಜಮೀನು ಪಶು ಸಂಗೋಪನಾ ಇಲಾಖೆಯ ಅಧೀನದಲ್ಲಿದೆ. ಹಾಲು ಒಕ್ಕೂಟವು ಕ್ಷೇತ್ರ ವ್ಯಾಪ್ತಿಯ 100 ಎಕರೆಯನ್ನು 50 ವರ್ಷಗಳ ಅವಧಿಗೆ ನೀಡುವಂತೆ ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಯಲ್ಲಿ ಉಲ್ಲೇಖಿಸಿದೆ.
ಕೊಯಿಲ ಫಾರ್ಮ್‌ನಲ್ಲಿ ಪಶು ಸಂಗೋಪನೆಗೆ ಪೂರಕವಾದ ಉದ್ಯಮ ಸೃಷ್ಟಿಸಲು ಇಚ್ಛಿಸಿರುವ ಪುತ್ತೂರು ಶಾಸಕ ಅಶೋಕ್ ರೈ ಅವರು ಹಾಲು ಒಕ್ಕೂಟದ ಆಶಯವನ್ನು ಬೆಂಬಲಿಸಿದ್ದಾರೆ. ಈ ವಿಷಯವನ್ನು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು, ಸಚಿವರು ಹಾಗೂ ಮುಖ್ಯಮಂತ್ರಿ ಗಮನಕ್ಕೂ ತಂದಿದ್ದು, ಹಾಲು ಒಕ್ಕೂಟ ನೀಡಿದ ಪತ್ರವನ್ನೂ ಸರ್ಕಾರಕ್ಕೆ ಒಪ್ಪಿಸಿದ್ದಾರೆ. 100 ಎಕರೆ ಜಮೀನಿನ ವಿಚಾರ ಸಂಪುಟಕ್ಕೆ ಬರಲಿದ್ದು, ಅಲ್ಲಿ ಅಂಗೀಕಾರಗೊಂಡರೆ ಬೇಡಿಕೆಯ ಜಮೀನು ದೊರಕಲಿದೆ.
ವೈಜ್ಞಾನಿಕವಾಗಿ ಸಂಶೋಧನೆ ಮಾಡಿರುವ ಟಿಎಂಆರ್ (ಟೋಟಲ್ ಮಿಕ್ಸ್ ರೇಷನ್) ಪಶು ಆಹಾರವನ್ನು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡುವ ವ್ಯವಸ್ಥೆ ಆರಂಭಗೊಂಡಿಲ್ಲ. ಈ ಕೊರತೆ ನೀಗಿಸಿ ಪಶು ಸಂಗೋಪನಾ ಇಲಾಖೆಗೆ ಶಕ್ತಿ ತುಂಬಲು ಹಾಲು ಒಕ್ಕೂಟ ಮುಂದಾಗಿದೆ. ಸರ್ಕಾರ ಒಪ್ಪಿಗೆ ನೀಡಿದರೆ ಮುಂದಿನ ಒಂದೆರಡು ವರ್ಷಗಳಲ್ಲಿ ಕೊಯಿಲ ಪಶು ಸಂಗೋಪನಾ ಕ್ಷೇತ್ರದಲ್ಲಿ ಪಶು ಆಹಾರ ಉತ್ಪಾದನಾ ಕೇಂದ್ರ ತಲೆ ಎತ್ತಲಿದೆ.
ಮಹತ್ವಾಕಾಂಕ್ಷಿ ಯೋಜನೆ: ಈ ಯೋಜನೆ ಬಗ್ಗೆ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಿ ಪುತ್ತೂರು ಶಾಸಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ 100 ಎಕರೆ ನೀಡಿದರೆ ಅಲ್ಲಿ ಪಶು ಆಹಾರ ಘಟಕ, ಪಶುಗಳಿಗೆ ರಸ ಮೇವು ಉತ್ಪಾದನೆ ಸೇರಿದಂತೆ ಸಮಗ್ರ ಪಶು ಆಹಾರ ಕೇಂದ್ರ ಸ್ಥಾಪನೆ ಮಾಡಲಿದ್ದೇವೆ. ಇದರಿಂದ ರೈತರಿಗೂ ಉಪಯೋಗ ಆಗಲಿದೆ. ಇದು ದಕ್ಷಿಣ ಕನ್ನಡ ಸಹಕಾರ ಹಾಲು ಒಕ್ಕೂಟದ ಮಹತ್ವಾಕಾಂಕ್ಷಿ ಯೋಜನೆಯಾಗಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ತಿಳಿಸಿದರು.
ನೂರಾರು ಮಂದಿಗೆ ಉದ್ಯೋಗವಕಾಶ: ಕೊಯಿಲ ಪಶು ಸಂಗೋಪನಾ ಕ್ಷೇತ್ರದಲ್ಲಿ ನೂರಾರು ಎಕರೆ ಜಾಗ ಪಾಳು ಬಿದ್ದಿದೆ. ಇದರ ಸದುಪಯೋಗವಾಗಬೇಕು. ಅಲ್ಲಿ ಹಸು, ಹಂದಿ, ಕೋಳಿ ಮುಂತಾದ ಪ್ರಾಣಿಗಳ ಸಾಕಣಿಕೆ, ತರಬೇತಿ, ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕೆಂಬುದು ನನ್ನ ಕನಸು. ಹಾಲು ಒಕ್ಕೂಟದವರಿಗೆ 100 ಎಕರೆ ನೀಡಿದರೆ ರಾಜ್ಯದಲ್ಲೇ ಉತ್ತಮ ಪಶು ಆಹಾರ ಕೇಂದ್ರ ತಲೆ ಎತ್ತಲಿದೆ. ಇದರಿಂದ ನೂರಾರು ಯುವಕರಿಗೆ ಉದ್ಯೋಗ ದೊರಕುತ್ತದೆ. ಹಾಲು ಉತ್ಪಾದಕರಿಗೆ ಬೆಂಬಲವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.