ಕಾಸರಗೋಡು: ಆಟೋ ರಿಕ್ಷಾ ಚಾಲಕನೋರ್ವ ಆತ್ಮಹತ್ಯೆಗೈದ ಆರೋಪಕ್ಕೆ ಒಳಗಾದ ಚಂದೇರ ಠಾಣಾ ಸಬ್ ಇನ್ಸ್ ಪೆಕ್ಟರ್ ಪಿ . ಅನೂಪ್ ನನ್ನು ಅಮಾನತುಗೊಳಿಸಲಾಗಿದೆ.
ಕಾಸರಗೋಡು ನಗರ ಠಾಣಾ ಸಬ್‌ಇನ್ಸ್ ಪೆಕ್ಟರ್ ಆಗಿದ್ದ ಪಿ. ಅನೂಪ್ ಅವರನ್ನು ಆತ್ಯಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಿನ್ನಲೆ ಚಂದೇರ ಠಾಣೆಗೆ ವರ್ಗಾಯಿಸಲಾಗಿತ್ತು.
ಸೋಮವಾರದಂದು ಅಬ್ದುಲ್ ಸತ್ತಾರ್ ರೈಲ್ವೆ ನಿಲ್ದಾಣ ಸಮೀಪದ ಕ್ವಾಟರ್ಸ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಗರದ ರಸ್ತೆ ಯೊಂದರಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದರೆಂಬ ಕಾರಣಕ್ಕೆ ಅಬ್ದುಲ್ ಸತ್ತಾರ್ ರವರ ಆಟೋರಿಕ್ಷಾವನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಹಲವು ಬಾರಿ ಠಾಣೆಯ ಮೆಟ್ಟಲೇರಿದ್ದರೂ ಆಟೋ ರಿಕ್ಷಾ ಬಿಟ್ಟು ಕೊಡಲು ಮುಂದಾಗಲಿಲ್ಲ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು.
ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಎಸ್ಪಿ ಬಾಲಕೃಷ್ಣನ್ ನಾಯರ್ ಗೆ ಆದೇಶ ನೀಡಲಾಗಿತ್ತು. ಇದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ .ಶಿಲ್ಪಾ ರವರಿಗೆ ವರದಿ ನೀಡಲಾಗಿತ್ತು. ಬಳಿಕ ಸಬ್‌ಇನ್ಸ್ ಪೆಕ್ಟರ್ ಅನೂಪ್ ಅವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಅನೂಪ್ ರವರನ್ನು ಅಮಾನತು ಗೊಳಿಸುವಂತೆ ಆಟೋ ಚಾಲಕರ ಸಂಘ, ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ಒತ್ತಾಯಿಸಿದ್ದವು. ಪ್ರತಿಭಟನೆಗೂ ಮುಂದಾಗಿದ್ದವು.